ಆ ಸಂದರ್ಭದಲ್ಲಿ ನಾನು ವಿರಾಟ್‌ ಭಯ್ಯಾರನ್ನು ಓಡಿ ಹೋಗಿ ಆಲಂಗಿಸಿದ್ದೆ: ಅದ್ಭುತ ಕ್ಷಣವನ್ನು ನೆನಪಿಸಿದ ಸಿರಾಜ್

Update: 2022-02-19 09:10 GMT

ಹೊಸದಿಲ್ಲಿ: ಯುವ, ಪ್ರತಿಭಾನ್ವಿತ ಬೌಲರ್ ಮೊಹಮ್ಮದ್ ಸಿರಾಜ್  ತಮಗೆ ಕ್ರಿಕೆಟಿಗ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ನೀಡಿರುವ ಪ್ರೋತ್ಸಾಹವನ್ನು ನೆನಪಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮೇಲೆ ಅಪಾರ ಗೌರವ ಹೊಂದಿರುವ 27 ವರ್ಷದ ಸಿರಾಜ್, 2018ರಲ್ಲಿ ಐಪಿಎಲ್ ವೇಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರಲ್ಲದೆ ವಿರಾಟ್ ಅವರು ತೋರಿದ ಔದಾರ್ಯವನ್ನು ಕೊಂಡಾಡಿದ್ದಾರೆ. ಅದು ತಮ್ಮ ಜೀವನದ ಅತ್ಯಪೂರ್ವ ಕ್ಷಣವೆಂದು ಆರ್‌ಸಿಬಿ ಪಾಡ್‍ಕಾಸ್ಟ್ ನಲ್ಲಿ ಅವರು ಹೇಳಿಕೊಂಡಿದ್ದಾರೆ.

"ಆಗ ನಾನು ಆರ್‍ಸಿಬಿ ತಂಡದ ಎಲ್ಲರನ್ನೂ ನನ್ನ ಮನೆಗೆ ಊಟಕ್ಕೆ  ಆಹ್ವಾನಿಸಿದ್ದೆ. ಹೋಟೆಲ್‍ನಿಂದ ನೇರ ಮನೆಗೆ ತೆರಳಿದ. ನಾನು ಅವರಿಗೆ (ವಿರಾಟ್) ಕರೆ ಮಾಡಿದಾಗ "ಬೆನ್ನಿನ ಸಮಸ್ಯೆಯಿದೆ, ಬರಲು ಸಾಧ್ಯವಿಲ್ಲ" ಎಂದರು. ನಾನು ಅವರಿಗೆ "ನೀವು ವಿಶ್ರಾಂತಿ ತೆಗೆದುಕೊಳ್ಳಿ" ಎಂದು ಹೇಳಿದೆ. ಅದಕ್ಕಿಂತ ಹೆಚ್ಚೇನು ಹೇಳಬಲ್ಲೆ ಎಂದು ಪಾಡ್‍ಕಾಸ್ಟ್ ನಲ್ಲಿ ಸಿರಾಜ್ ಹೇಳಿದ್ದಾರೆ.

"ಆದರೆ ನಂತರ ಎಲ್ಲರೂ ಬಂದಾಗ, ಅವರು ಕೂಡ ಕಾರಿನಿಂದ ಇಳಿಯುತ್ತಿರುವುದನ್ನು ಕಂಡೆ. ಪಿಪಿ(ಪಾರ್ಥಿವ್ ಪಟೇಲ್) ಭಾಯಿ, ಚಾಹಲ್ ಭಾಯಿ ಎಲ್ಲರೂ ಇದ್ದರು. ನಾನು ಭೈಯ್ಯಾ(ವಿರಾಟ್) ಅವರತ್ತ ಓಡಿ ಅವರನ್ನು ಆಲಂಗಿಸಿದೆ. ಅದು ನನ್ನ ಜೀವನದ ಅತ್ಯಂತ ದೊಡ್ಡ ಸರ್‍ಪ್ರೈಸ್. ಏಕೆಂದರೆ ಭೈಯ್ಯಾ (ವಿರಾಟ್) ಅವರು ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಅವರು ಬಂದಾಗ, ವಿರಾಟ್ ಕೊಹ್ಲಿ ಟೋಲಿ ಚೌಕಿಗೆ ಬಂದರು ಎಂದು ಸುದ್ದಿಯಾಯಿತು" ಎಂದು ಸಿರಾಜ್ ಹೇಳಿದರು.

ಆರ್‌ಸಿಬಿ ತಂಡದ ಇತರರೊಂದಿಗೆ ಕೊಹ್ಲಿ ಅವರು ಸಿರಾಜ್ ಅವರ ಹೈದರಾಬಾದ್ ನಿವಾಸದಲ್ಲಿ ಬಿರಿಯಾನಿ ಸವಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಸಿರಾಜ್ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ `ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಮತ್ತು ನನ್ನ ಕುಟುಂಬಕ್ಕೆ ಗೌರವ. ನಿಮ್ಮ ಅಮೂಲ್ಯ ಸಮಯವನ್ನು ನಮ್ಮ ಮನೆಯಲ್ಲಿ ಔತಣದಲ್ಲಿ ಭಾಗವಹಿಸಲು ವ್ಯಯಿಸಿದ್ದಕ್ಕೆ ಧನ್ಯವಾದಗಳು" ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News