ಕೊಹ್ಲಿ, ಪಂತ್‍ಗೆ 10 ದಿನ ವಿರಾಮ ನೀಡಿದ ಬಿಸಿಸಿಐ: ಟಿ-20 ಪಂದ್ಯಕ್ಕೆ ಮುಂಚೆಯೇ ಮನೆ ಸೇರಿದ ಕ್ರಿಕೆಟಿಗರು

Update: 2022-02-19 09:14 GMT

ಹೊಸದಿಲ್ಲಿ: ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರಿಗೆ 10 ದಿನದ ವಿರಾಮವನ್ನು ಬಿಸಿಸಿಐ ನೀಡಿರುವ ಹಿನ್ನೆಲೆಯಲ್ಲಿ ಅವರು ಭಾರತೀಯ ತಂಡದ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಬಳಸುವ ಬಯೋ-ಬಬ್ಬಲ್‍ನಿಂದ ಹೊರಬಂದು  ರವಿವಾರ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದ ಮುನ್ನವೇ ಇಂದು ಬೆಳಿಗ್ಗೆ ತಮ್ಮ ಮನೆಗಳಿಗೆ ಮರಳಿದ್ದಾರೆ.

"ಬಿಸಿಸಿಐ ನಿರ್ಧಾರದಂತೆ ಎಲ್ಲಾ ವಿಧದ ಕ್ರಿಕೆಟ್ ಆಡುವ ಆಟಗಾರರಿಗೆ ಬಬ್ಬಲ್‍ನಿಂದ ನಿಯಮಿತ ಬ್ರೇಕ್ ನೀಡಿ ಅವರ ಕೆಲಸದ ಹೊರೆಯನ್ನು ಕಡಿಮೆಗೊಳಿಸಿ ಅವರ ಮಾನಸಿಕ ಆರೋಗ್ಯವೂ ಚೆನ್ನಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ,'' ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊಹ್ಲಿ ಹಾಗೂ ಪಂತ್ ಇಬ್ಬರಿಗೂ ಟೆಸ್ಟ್ ಪಂದ್ಯ ಬಹಳ ಪ್ರಮುಖವಾಗಿದ್ದು ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಮಾರ್ಚ್ 4ರಿಂದ 8ರ ತನಕ ಹಾಗೂ ಬೆಂಗಳೂರಿನಲ್ಲಿ ಮಾರ್ಚ್ 12ರಿಂದ 16ರ ತನಕ ನಡೆಯಲಿರುವ ಪಂದ್ಯಗಳಿಗೆ ವಾಪಸಾಗಲಿದ್ದಾರೆ.

ಕೊಹ್ಲಿ ಮತ್ತು ಪಂತ್ ಅವರೊಂದಿಗೆ ಮಾಯಾಂಗ್ ಅಗರ್ವಾಲ್, ಆರ್ ಅಶ್ವಿನ್, ಹನುಮ ವಿಹಾರಿ ಕೂಡ ತಿಂಗಳಾಂತ್ಯಕ್ಕೆ ಚಂಡೀಗಢದಲ್ಲಿ ಬಯೋ-ಬಬ್ಬಲ್ ಪ್ರವೇಶಿಸಲಿದ್ದಾರೆ.

ಮೊಹಾಲಿ ಟೆಸ್ಟ್ ಪಂದ್ಯ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವಾಗಲಿರುವುದರಿಂದ ಈ ಸಂದರ್ಭ ಅವರು ದೈಹಿಕವಾಗಿ ಸಕ್ಷಮವಾಗಿರಬೇಕು ಹಾಗೂ ವಿರಾಮದಿಂದ ಅವರ ಮನಸ್ಸೂ ಪ್ರಫುಲ್ಲವಾಗಿರಬೇಕೆಂದು ಬಿಸಿಸಿಐ ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News