×
Ad

ಸಿಎಎ ಪ್ರತಿಭಟನಕಾರನ ನಿಗೂಢ ಸಾವು: ಪಶ್ಚಿಮಬಂಗಾಳದಲ್ಲಿ ಪ್ರತಿಭಟನೆಗೆ ಎಸ್ಎಫ್ಐ ನಿರ್ಧಾರ

Update: 2022-02-20 23:02 IST

ಸಾಂದರ್ಭಿಕ ಚಿತ್ರ

ಕೋಲ್ಕತಾ, ಫೆ. 20: ಹೌರಾಹ್ ಜಿಲ್ಲೆಯಲ್ಲಿ ಸಂಭವಿಸಿದ ಎಡಪಕ್ಷದ ನಾಯಕ ಅನೀಶ್ ಖಾನ್ ಅವರ ನಿಗೂಢ ಸಾವಿನ ಕುರಿತು ಪಶ್ಚಿಮಬಂಗಾಳದಾದ್ಯಂತ ಪ್ರತಿಭಟನೆ ಆಯೋಜಿಸಲು ಸಿಪಿಐ (ಎಂ)ನ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ನಿರ್ಧರಿಸಿದೆ. ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಗಳು ಅಮ್ಟಾದಲ್ಲಿರುವ ತಮ್ಮ ನಿವಾಸಕ್ಕೆ ಶುಕ್ರವಾರ ರಾತ್ರಿ ಪ್ರವೇಶಿಸಿದರು. ಸಿಎಎ ವಿರುದ್ಧದ ಪ್ರತಿಭಟನೆ ಸಂದರ್ಭ ಪ್ರಾಮುಖ್ಯತೆ ಪಡೆದುಕೊಂಡಿದ್ದ ಎಡ ಪಕ್ಷದ ನಾಯಕನನ್ನು ಮನೆಯ ಟೆರೇಸ್‌ಗೆ ಎಳೆದುಕೊಂಡು ಹೋದರು. ಅನಂತರ ಅಲ್ಲಿಂದ ಕೆಳಗೆಸೆದರು. ಇದರಿಂದ ಅವರ ಸಾವು ಸಂಭವಿಸಿದೆ ಎಂದು ಖಾನ್ ನ ಕುಟುಂಬಿಕರು ಆರೋಪಿಸಿದ್ದಾರೆ.

ಖಾನ್ ಅವರ ನಿವಾಸಕ್ಕೆ ಪೊಲೀಸರು ಪ್ರವೇಶಿಸಿದ್ದಾರೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಖಾನ್ ಅವರ ಮೃತದೇಹ ಮನೆಯ ಸಮೀಪ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್ ಹತ್ಯೆಯ ರೂವಾರಿ ಎಂದು ಸಿಪಿಐ (ಎಂ) ಹಾಗೂ ಬಿಜೆಪಿ ಆರೋಪಿಸಿದೆ. ಆದರೆ, ಆಡಳಿತಾರೂಢ ಪಕ್ಷ ಇದು ಪಿತೂರಿ. ಇದನ್ನು ಪಶ್ಚಿಮಬಂಗಾಳದ ಹೊರಗೆ ರೂಪಿಸಲಾಗಿದೆ ಎಂದು ಆಪಾದಿಸಿದೆ. ಆಲಿಯಾ ವಿಶ್ವವಿದ್ಯಾನಿಲಯದ 500ಕ್ಕೂ ಅಧಿಕ ವಿದ್ಯಾರ್ಥಿಗಳು ಪಕ್ಷಬೇಧ ಮರೆತು ಕೋಲ್ಕತ್ತಾದಲ್ಲಿ ಶನಿವಾರ ರಾತ್ರಿ ಮೊಂಬತ್ತಿ ರ್ಯಾಲಿ ನಡೆಸಿದ್ದಾರೆ. ಈ ಸಂದರ್ಭ ಅವರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಕೊರೋನ ವೈರಸ್ ಕಾರಣದಿಂದ ಜಾರಿಗೊಳಿಸಲಾದ ಲಾಕ್‌ಡೌನ್ ಸಂದರ್ಭ ಬಡ ಜನರಿಗೆ ನರೆವು ನೀಡಿದ್ದ ಖಾನ್ ಹಂತಕರನ್ನು ಬಂಧಿಸುವಂತೆ ಹಾಗೂ ಕಠಿಣ ಶಿಕ್ಷೆ ವಿಧಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News