ದ್ವಿತೀಯ ಟ್ವೆಂಟಿ-20:ಭಾರತಕ್ಕೆ ಭರ್ಜರಿ ಜಯ, ಸರಣಿ ಸೋತ ಶ್ರೀಲಂಕಾ

Update: 2022-02-26 17:08 GMT
 ಶ್ರೇಯಸ್ ಅಯ್ಯರ್, Photo:BCCI

  ಧರ್ಮಶಾಲಾ, ಫೆ.26: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸಾಹಸದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ 2ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಗೆದ್ದುಕೊಂಡಿದೆ.

ಗೆಲ್ಲಲು 184 ರನ್ ಗುರಿ ಬೆನ್ನಟ್ಟಿದ ಭಾರತವು 17.1 ಓವರ್‌ಗಳಲ್ಲಿ 186 ರನ್ ಗಳಿಸಿತು. ಶ್ರೇಯಸ್ ಅಯ್ಯರ್(ಔಟಾಗದೆ 74, 44 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ರವೀಂದ್ರ ಜಡೇಜ(ಔಟಾಗದೆ 45, 18 ಎಸೆತ, 7 ಬೌಂ., 1 ಸಿಕ್ಸರ್)4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 58 ರನ್ ಸೇರಿಸಿ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.

ಶನಿವಾರ ಟಾಸ್ ಜಯಿಸಿದ ಭಾರತವು ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಲಂಕಾವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು. ನಿಶಾಂಕ್(75, 53 ಎಸೆತ, 11 ಬೌಂಡರಿ)ಹಾಗೂ ನಾಯಕ ದಸುನ್ ಶನಕ(ಔಟಾಗದೆ 47, 19 ಎಸೆತ, 2 ಬೌಂ, 5 ಸಿಕ್ಸರ್)ತಂಡವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.ನಿಶಾಂಕ್ 43 ಎಸೆತಗಳಲ್ಲಿ 5ನೇ ಅರ್ಧಶತಕ ಸಿಡಿಸಿದರು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಭಾರತ ನಾಯಕ ರೋಹಿತ್ ಶರ್ಮಾ(1) ವಿಕೆಟನ್ನು ಮೊದಲ ಓವರ್‌ನಲ್ಲಿ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 16 ರನ್ ಗಳಿಸಿ ಔಟಾದರು. ಆಗ ತಂಡಕ್ಕೆ ಆಸರೆಯಾದವರು ಶ್ರೇಯಸ್ ಅಯ್ಯರ್. 30 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 5ನೇ ಅರ್ಧಶತಕ ಸಿಡಿಸಿದ ಶ್ರೇಯಸ್ ಅವರು ಸ್ಯಾಮ್ಸನ್ ಜೊತೆಗೆ 3ನೇ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿದರು. ಸ್ಯಾಮ್ಸನ್(39 ರನ್, 25 ಎಸೆತ)ಔಟಾದ ಬಳಿಕ ಆಲ್‌ರೌಂಡರ್ ರವೀಂದ್ರ ಜಡೇಜ ಜೊತೆ ಕೈಜೋಡಿಸಿದ ಶ್ರೇಯಸ್  ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೇಯಸ್ ಸತತ ಎರಡನೇ ಅರ್ಧಶತಕ ಸಿಡಿಸಿದ ತಂಡವನ್ನು ಆಧರಿಸಿದರು.

ಶ್ರೀಲಂಕಾದ ಪರ ನಿಶಾಂಕ್ ಹಾಗೂ ದನುಷ್ಕ ಗುಣತಿಲಕ(38 ರನ್, 29 ಎಸೆತ, 4 ಬೌಂ., 2 ಸಿ.)ಮೊದಲ ವಿಕೆಟಿಗೆ 67 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಔಟಾದ ಬಳಿಕ ಚರಿತ ಅಸಲಂಕ(2)ಕಮಿಲ್ ಮಿಶರ(1), ದಿನೇಶ್ ಚಾಂಡಿಮಲ್(9)ಬೆನ್ನುಬೆನ್ನಿಗೆ ಔಟಾದರು. ಭಾರತದ ಪರ ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್, ಭುವನೇಶ್ವರ ಕುಮಾರ್, ರವೀಂದ್ರ ಜಡೇಜ ಹಾಗೂ ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News