×
Ad

"ರಷ್ಯಾ ನೀವು ಹೋರಾಡಿ, ನಿಮ್ಮೊಂದಿಗೆ ನಾವಿದ್ದೇವೆ": ದಿಲ್ಲಿಯಲ್ಲಿ ಮೆರವಣಿಗೆ ನಡೆಸಿದ ಹಿಂದೂ ಸೇನಾ !

Update: 2022-03-06 23:02 IST
Photo: Indianexpress.com/Abhinav Saha

ಹೊಸದಿಲ್ಲಿ: ಬಲಪಂಥೀಯ ಸಂಘಟನೆಯಾದ ಹಿಂದೂ ಸೇನೆಯ ಸ್ವಯಂಸೇವಕರು ರವಿವಾರ ದಿಲ್ಲಿಯ ಮಧ್ಯಭಾಗ ಕನ್ನಾಟ್ ಪ್ಲೇಸ್‌ನಲ್ಲಿ ರಷ್ಯಾವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುವ ಮೆರವಣಿಗೆ ನಡೆಸಿದರು.

‘ರಷ್ಯಾ ತುಮ್ ಸಂಘರ್ಷ್ ಕರೋ, ಹಮ್ ತುಮ್ಹಾರೆ ಸಾಥ್ ಹೇ (ರಷ್ಯಾ, ನೀವು ಹೋರಾಡಿ, ನಾವು ನಿಮ್ಮೊಂದಿಗೆ ಇದ್ದೇವೆ)’, ‘ಭಾರತ್ ಮಾತಾ ಕಿ ಜೈ’, ‘ಭಾರತ್-ರಷ್ಯಾ ದೋಸ್ತಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಾ ಸ್ವಯಂಸೇವಕರು ಸುಮಾರು ಒಂದು ಗಂಟೆ ಕಾಲ ಮೆರವಣಿಗೆ ನಡೆಸಿದರು.

ಇದನ್ನೂ ಓದಿ:  ಉಕ್ರೇನ್‌ನಿಂದ‌ ಬಂದು ಕೇಂದ್ರ ಸರಕಾರವನ್ನು ಟೀಕಿಸಿದ ವಿದ್ಯಾರ್ಥಿಯ ಹೆಸರು ಮುಹಮ್ಮದ್‌ ಅನೀಶ್‌ ಹೌದೇ?

ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಮಾತನಾಡಿ, “ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕೃತ ನಿಲುವಿನ ವಿಚಾರಕ್ಕೆ ನಾವು ಬರುವುದಿಲ್ಲ, ಭಾರತವು ರಷ್ಯಾದ ಪರವಾಗಿ ಮತಚಲಾಯಿಸಬೇಕಿತ್ತು. ರಷ್ಯಾ ಯಾವತ್ತೂ ನಮ್ಮ ನಾಗರಿಕರನ್ನು ರಕ್ಷಿಸಿದೆ ಮತ್ತು ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ನಮ್ಮ ಪರಮಾಣು ಕಾರ್ಯಕ್ರಮದ ವಿರುದ್ಧ ಮತ ಚಲಾಯಿಸಿದ ಫ್ಯಾಸಿಸ್ಟ್, ಜನಾಂಗೀಯವಾದಿ ಉಕ್ರೇನ್ ವಿರುದ್ಧ ನಾವು ರಷ್ಯಾವನ್ನೇ ಬೆಂಬಲಿಸುತ್ತೇವೆ" ಎಂದು ಹೇಳಿದ್ದಾಗಿ indianexpress.com ವರದಿ ಮಾಡಿದೆ.

"ಯಾವುದೇ ಯುದ್ಧವು ಒಳ್ಳೆಯದಲ್ಲ, ಆದರೆ ನಾವು ಒಳ್ಳೆಯದು ಮತ್ತು ಉತ್ತಮವಾದವುಗಳ ನಡುವೆ ಆಯ್ಕೆ ಮಾಡಬೇಕು ಎಂದರೆ ನಾವು ರಷ್ಯಾದ ಬೆಂಬಲಕ್ಕೆ ನಿಲ್ಲುತ್ತೇವೆ, ಏಕೆಂದರೆ ರಷ್ಯಾ ಯಾವಾಗಲೂ ಭಾರತದ ನಿಜವಾದ ಸ್ನೇಹಿತ" ಎಂದು ಅವರು ಹೇಳಿದರು. ಪ್ರತಿಭಟನೆಗೆ ಪೂರ್ವಾನುಮತಿ ಪಡೆಯದಿದ್ದ ಕಾರಣ ಒಂದು ಗಂಟೆಯ ಬಳಿಕ ಪೊಲೀಸರು ನೆರೆದವರನ್ನು ಚದುರಿಸಿದರು.

ಉಕ್ರೇನ್ ವಿರುದ್ಧದ ಆಕ್ರಮಣ ಮತ್ತು "ಅಖಂಡ ರಷ್ಯಾ"ಕ್ಕೆ ಬೆಂಬಲವನ್ನು ಘೋಷಿಸುವ ಮೂಲಕ ಹಿಂದೂ ಸೇನೆಯು ಈ ಹಿಂದೆ ಹೊಸದಿಲ್ಲಿಯ ಮಂಡಿ ಹೌಸ್‌ನಲ್ಲಿರುವ ರಷ್ಯಾದ ಬರಹಗಾರ ಅಲೆಕ್ಸಾಂಡರ್ ಪುಷ್ಕಿನ್ ಅವರ ಪ್ರತಿಮೆಯ ಮೇಲೆ ಪೋಸ್ಟರ್‌ಗಳನ್ನು ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News