ಉಕ್ರೇನ್ನಿಂದ ಬಂದು ಕೇಂದ್ರ ಸರಕಾರವನ್ನು ಟೀಕಿಸಿದ ವಿದ್ಯಾರ್ಥಿಯ ಹೆಸರು ಮುಹಮ್ಮದ್ ಅನೀಶ್ ಹೌದೇ?
ಸಾಮಾಜಿಕ ಜಾಲತಾಣದ ʼಮುಸ್ಲಿಂ ವಿದ್ಯಾರ್ಥಿಯಿಂದ ಕೇಂದ್ರದ ಟೀಕೆʼ ಎಂಬ ಸಂದೇಶದ ಸತ್ಯಾಸತ್ಯತೆ ಏನು?

Photo: Screengrab/newsfirstlive
ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಿಂದ ವಾಪಸಾದ ಬಳಿಕ ಭಾರತೀಯ ರಾಯಭಾರ ಕಚೇರಿಯನ್ನು ಟೀಕಿಸಿದ್ದ ವಿದ್ಯಾರ್ಥಿಯ ಹೆಸರನ್ನು ತಿರುಚಿ, ಆತ ಮುಸ್ಲಿಂ ಎಂದು ಸುಳ್ಳು ವದಂತಿ ಹರಡುತ್ತಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಉಕ್ರೇನ್ ನಿಂದ ವಾಪಸ್ಸಾಗಿದ್ದ ಬೆಂಗಳೂರಿನ ಅನೀಶ್ ಎಂಬ ವೈದ್ಯಕೀಯ ವಿದ್ಯಾರ್ಥಿ ರಾಯಭಾರ ಕಚೇರಿ ಯಾವುದೇ ಸಹಾಯಕ್ಕೆ ಬಂದಿಲ್ಲ ಎಂದಿದ್ದರು. ಉಕ್ರೇನ್ ನಿಂದ ದಿಲ್ಲಿಗೆ ಆಗಮಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ನಾವೇ ಖುದ್ದಾಗಿ ವಿದ್ಯಾರ್ಥಿಗಳೇ ಬಸ್ ಮಾಡಿಕೊಂಡು ಗಡಿ ಪ್ರದೇಶಕ್ಕೆ ಬಂದಿದ್ದೆವು. ಭಾರತ ಸರಕಾರ ನಾವೇ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅದೆಲ್ಲಾ ಸುಳ್ಳು. ಇಮಿಗ್ರೇಶನ್ ಕೂಡ ನಾವು ಮಾಡಿದ್ದೇವೆ. ಇಲ್ಲಿ ಮಿನಿಸ್ಟರ್ ಗಳು ಶೋ ಆಫ್ ಮಾಡುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿ ಮತ್ತು ಕೇಂದ್ರ ಸರಕಾರ ನಮಗೆ ಸಹಾಯ ಮಾಡಿಲ್ಲ" ಎಂದಿದ್ದರು.
ಅನೀಶ್ ಮಾತನಾಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಹಾಯ ಮಾಡದೆ, ವಿದ್ಯಾರ್ಥಿಗಳೇ ಎಲ್ಲಾ ಅಪಾಯಗಳನ್ನು ದಾಟಿ ಗಡಿ ಪ್ರದೇಶಕ್ಕೆ ಬಂದ ಬಳಿಕ ಅವರಿಗೆ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೆ ರಕ್ಷಣಾ ಕಾರ್ಯಾಚರಣೆ ಎನ್ನುತ್ತಾರೆಯೇ ಎಂದು ಹಲವರು ಪ್ರಶ್ನಿಸಿದ್ದರು. ಆದರೆ ಮತ್ತೊಂದೆಡೆ ಬಲಪಂಥೀಯರು ವಿದ್ಯಾರ್ಥಿ ಅನೀಶ್ ಮೇಲೆ ಮುಗಿಬಿದ್ದಿದ್ದರು.
ʼನಿಯ್ಯತ್ತಿಲ್ಲದವರುʼ, ʼಕೃತಜ್ಞತೆ ಇಲ್ಲದವರುʼ ಎಂದು ಟೀಕಿಸಿದ್ದು ಮಾತ್ರವಲ್ಲ, ದೇಶದ್ರೋಹಿ ಪಟ್ಟವನ್ನೂ ಕಟ್ಟಿದ್ದರು. ಇದಾದ ಬಳಿಕದ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ವೈರಲ್ ಆಗಿತ್ತು. ಸರಕಾರವನ್ನು ಟೀಕಿಸಿದ ವಿದ್ಯಾರ್ಥಿಯ ಹೆಸರು ʼಮುಹಮ್ಮದ್ ಹನೀಶ್ʼ ಎನ್ನುವುದು ಆ ಸಂದೇಶದಲ್ಲಿತ್ತು.
ಟ್ವಿಟರ್, ಫೇಸ್ಬುಕ್, ವಾಟ್ಸಾಪ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯರು ಇಂತಹ ಸಂದೇಶಗಳನ್ನು ಹರಿಯಬಿಟ್ಟಿದ್ದರು. ಕನ್ನಡ ಮಾಧ್ಯಮ ಸುವರ್ಣ ನ್ಯೂಸ್ ನಡೆಸಿದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಕ್ತಾರರಾದ ಮಹೇಶ್ ಅವರು ಕೂಡ ಸರಕಾರವನ್ನು ಟೀಕಿಸಿದ್ದ ವಿದ್ಯಾರ್ಥಿಯ ಹೆಸರು ʼಮುಹಮ್ಮದ್ ಹನೀಶ್ʼ ಎಂದಿದ್ದರು. ಕೂಡಲೇ ಅವರ ಮಾತುಗಳನ್ನು ತಡೆದಿದ್ದ ನಿರೂಪಕ ಅಜಿತ್ ಹನುಮಕ್ಕನವರ್, "ಮುಹಮ್ಮದ್ ಹನೀಶ್ ಆದರೆ ಏನು ತಪ್ಪು, ತನಗಾಗಿದ್ದ ಕಷ್ಟವನ್ನು ಅವನು ಹೇಳಿಕೊಳ್ಳಬಾರದಾ?, ಮುಹಮ್ಮದ್ ಹನೀಶ್ ಆದರೆ ಏನಾಯಿತು?" ಎಂದು ಪ್ರಶ್ನಿಸಿದ್ದರು.
ವಾಸ್ತವ ಏನು?
ವಿದ್ಯಾರ್ಥಿ ಅನೀಶ್ ಅವರನ್ನು ಮಾತನಾಡಿಸಿದ ಅದೇ ದಿನ ಕನ್ನಡದ ಮಾಧ್ಯಮಗಳು ಅನೀಶ್ ಅವರ ತಂದೆಯನ್ನು ಮಾತನಾಡಿಸಿದ್ದವು. ನ್ಯೂಸ್ ಫರ್ಸ್ ಚಾನೆಲ್ ಇದೇ ವಿಚಾರಕ್ಕೆ ಸಂಬಂಧಿಸಿ ಅದೇ ದಿನ ಅನೀಶ್ ತಂದೆ ಗಿರಿನಗರ ನಿವಾಸಿ ಹನುಮಂತಯ್ಯ ಅವರನ್ನು ಮಾತನಾಡಿಸಿತ್ತು. ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದ ಹನುಮಂತಯ್ಯ ಅವರು ಕೂಡ ರಾಯಭಾರ ಕಚೇರಿಯನ್ನು ಟೀಕಿಸಿದ್ದರು. ಇದಿಷ್ಟು ಮಾತ್ರವಲ್ಲದೆ, ತಾನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ತನ್ನ ಮಗನ ವಿಚಾರದ ಬಗ್ಗೆ ಮೆಸೇಜ್ ಮಾಡಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ತೇಜಸ್ವಿ ಸೂರ್ಯ ಅವರಿಗೆ ತಾನು ಕಳುಹಿಸಿದ ಸಂದೇಶವನ್ನು ಹನುಮಂತಯ್ಯ ಮಾಧ್ಯಮಗಳಿಗೂ ತೋರಿಸಿದ್ದರು. ಆ ಸಂದೇಶ ಹೀಗಿತ್ತು. ́
Hanumanthaiah resident of Girinagar wanted to talk regarding my son Anish Jayanth studying in 2nd-year MBBS at Vinnytsya city of Ukraine.

ಈ ಸಂದೇಶವನ್ನು ಗಮನಿಸಿದರೆ ಸಾಕು ಅನೀಶ್ ಅವರು ಸಂಪೂರ್ಣ ಹೆಸರು ಅನೀಶ್ ಜಯಂತ್ ಎನ್ನುವುದು ಗೊತ್ತಾಗುತ್ತದೆ. ಅನೀಶ್ ಅವರ ತಂದೆಯ ಹೆಸರು ಹನುಮಂತಯ್ಯ ಎಂದು. ಹೀಗಾಗಿ ಅನೀಶ್ ಅವರ ಸಂಪೂರ್ಣ ಹೆಸರು ಮುಹಮ್ಮದ್ ಅನೀಶ್ ಅಲ್ಲ, ಬದಲಾಗಿ ಅನೀಶ್ ಜಯಂತ್ ಎನ್ನುವುದನ್ನು 'ವಾರ್ತಾಭಾರತಿ ಫ್ಯಾಕ್ಟ್ ಚೆಕ್' ಖಾತರಿಪಡಿಸಿದೆ.

ಅನೀಶ್ ತಂದೆ ಹನುಮಂತಯ್ಯ (Photo: Screengrab/newsfirstlive)
ಈ ಮೂಲಕ ಕೇಂದ್ರ ಸರಕಾರವನ್ನು ಟೀಕಿಸುವವರು ಮುಸ್ಲಿಂ ವಿದ್ಯಾರ್ಥಿಗಳು ಎನ್ನುವ ದ್ವೇಷದ ವದಂತಿಗಳನ್ನು ಹರಡುವ ಮೂಲಕ ಕೇಂದ್ರ ಸರಕಾರದ ವಿರುದ್ಧದ ಟೀಕೆಗಳನ್ನು ಮುಸ್ಲಿಮರ ಮೇಲೆ ಹೊರಿಸುವ ಷಡ್ಯಂತ್ರ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ. ಇದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ವಕ್ತಾರರೇ , ಲೈವ್ ಟಿವಿ ಡಿಬೇಟ್ ನಲ್ಲಿ ಓದಿ ಹೇಳುತ್ತಾರೆ, ನಿರೂಪಕರು ಕೂಡ ಸತ್ಯಾಸತ್ಯತೆಯನ್ನು ಅರಿಯದೆ, ಮುಹಮ್ಮದ್ ಹನೀಶ್ ಆದರೆ ಏನು ತಪ್ಪು?ʼ ಎಂದಷ್ಟೇ ಪ್ರಶ್ನಿಸುತ್ತಾರೆ.







