ಗೋವಾದಲ್ಲಿ ಸರಕಾರ ರಚನೆಯ ಕಸರತ್ತು ಆರಂಭ: ಆಪ್, ಟಿಎಂಸಿ ಜೊತೆ ಮೈತ್ರಿಗೆ ಸಿದ್ದ ಎಂದ ಕಾಂಗ್ರೆಸ್

Update: 2022-03-08 08:08 GMT

ಹೊಸದಿಲ್ಲಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಎಕ್ಸಿಟ್ ಪೋಲ್ ನಲ್ಲಿ ಬಹಿರಂಗವಾದ ಬಳಿಕ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರ ರಚನೆಗೆ ಫಲಿತಾಂಶಕ್ಕೆ ಮೊದಲೇ ಕಸರತ್ತು ಆರಂಭಿಸಿವೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯ ಚುನಾವಣಾ ಫಲಿತಾಂಶಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ದಿಲ್ಲಿಗೆ ತೆರಳಿದ್ದಾರೆ

ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಸ್ವತಂತ್ರ ಪಕ್ಷಗಳೊಂದಿಗೆ ಬಿಜೆಪಿ ಮಾತುಕತೆ ಆರಂಭಿಸಿದೆ ಎಂದು ನಂಬಲಾಗಿದೆ.

ದಿಲ್ಲಿ ಹಾಗೂ  ಬಂಗಾಳದಂತಹ ರಾಜ್ಯಗಳಲ್ಲಿ ಕಡು ಪ್ರತಿಸ್ಪರ್ಧಿಗಳಾದ ಅರವಿಂದ ಕೇಜ್ರಿವಾಲ್ (ಎಎಪಿ) ಹಾಗೂ  ತೃಣಮೂಲ ಜೊತೆ ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಭಾರೀ ಬದಲಾವಣೆಯನ್ನು ಸೂಚಿಸಿದೆ.

"ಬಿಜೆಪಿಯನ್ನು ವಿರೋಧಿಸುವ ಯಾವುದೇ ಪಕ್ಷದೊಂದಿಗೆ ನಾವು ಮೈತ್ರಿಗೆ ಮುಕ್ತವಾಗಿದ್ದೇವೆ. ತೃಣಮೂಲ ಕಾಂಗ್ರೆಸ್ ಹಾಗೂ  ಎಎಪಿ ಅಥವಾ ಗೋವಾದಲ್ಲಿ ಬಿಜೆಪಿ ವಿರುದ್ಧ ಇರುವ ಯಾರೊಂದಿಗಾದರೂ ನಾವು ಮೈತ್ರಿಗೆ ಮುಕ್ತವಾಗಿದ್ದೇವೆ" ಎಂದು ಕಾಂಗ್ರೆಸ್ ನಾಯಕ ಹಾಗೂ  ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಗೋವಾದಲ್ಲಿ ಮೊದಲ ಬಾರಿ ಸ್ಪರ್ಧಿಸಿರುವ  ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಮೂರು ಸ್ಥಾನ ಸಿಗಲಿದೆ ಎಂದು ಎಕ್ಸಿಟ್ ಪೋಲ್ ತಿಳಿಸಿದೆ.  ಇದು ಸಂಖ್ಯೆಗಳ ಆಟದಲ್ಲಿ ಪಕ್ಷದ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ. ಎಂಜಿಪಿ ಜೊತೆ ತೃಣಮೂಲ ಮೈತ್ರಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News