"ಸತತ ಮನವಿ ಮಾಡಿದರೂ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಸುರಕ್ಷಿತ ಕಾರಿಡಾರ್‌ ವ್ಯವಸ್ಥೆ ಮಾಡಲಾಗಿಲ್ಲ"

Update: 2022-03-08 08:16 GMT
ಟಿ ಎಸ್ ತಿರುಮೂರ್ತಿ (Photo: Twitter/@ambtstirumurti)

ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‍ನಿಂದ ಭಾರತ ಇಲ್ಲಿಯ ತನಕ 20,000ಕ್ಕೂ ಅಧಿಕ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದೆಯಾದರೂ ಉಕ್ರೇನ್‍ನ ಸುಮಿ ನಗರದಲ್ಲಿ ಇನ್ನೂ ಸಿಲುಕಿರುವ ಹಲವಾರು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ತರಲು ಸುರಕ್ಷಿತ ಕಾರಿಡಾರ್ ವ್ಯವಸ್ಥೆಗೊಳಿಸುವಂತೆ ತಾನು  ರಷ್ಯಾ ಮತ್ತು ಉಕ್ರೇನ್‍ಗೆ ಮಾಡಿರುವ ಸತತ ಮನವಿಗಳು ಇನ್ನೂ ಫಲ ನೀಡಿಲ್ಲ ಎಂದು ಸರಕಾರ ಕಳವಳ ವ್ಯಕ್ತಪಡಿಸಿದೆ.

ಸೋಮವಾರ ನಡೆದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವ ಸಂಸ್ಥೆಯ ರಾಯಭಾರಿಗೆ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ, ಎಲ್ಲಾ ರೀತಿಯ ವೈರತ್ವವು ತಕ್ಷಣ ಅಂತ್ಯಗೊಳ್ಳಬೇಕೆಂಬುದು ಭಾರತದ ಬಯಕೆಯಾಗಿದೆ ಎಂದರಲ್ಲದೆ ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಎಲ್ಲಾ ಅಮಾಯಕ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಹೊರತರಲು ಸುರಕ್ಷಿತ ಕಾರಿಡಾರ್ ವ್ಯವಸ್ಥೆಗೆಗಾಗಿ ಭಾರತ ಸತತ ಅಪೀಲು ಸಲ್ಲಿಸಿದೆ ಆದರೆ ಇದರ ಹೊರತಾಗಿಯೂ ಸುಮಿ ನಗರದಲ್ಲಿ ಸಿಲುಕಿರುವ ಹಲವಾರು ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿಂದ ವಾಪಸಾಗಲು ಸುರಕ್ಷಿತ ಹಾದಿ ಕಲ್ಪಿಸುವುದು ಸಾಧ್ಯವಾಗಿಲ್ಲ ಎಂದು ಹೇಳಿದರು.

ನಮ್ಮನ್ನು ಸಂಪರ್ಕಿಸಿದ ಇತರ ದೇಶಗಳಿಗೂ ಸಹಾಯ ಮಾಡಿದ್ದೇವೆ, ಮುಂದಿನ ದಿನಗಳಲ್ಲೂ ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಪ್ರತಿ ದಿನ 80ಕ್ಕೂ ಅಧಿಕ ವಿಮಾನ ಸೇವೆಗಳು ಭಾರತೀಯರನ್ನು ವಾಪಸ್ ಕರೆತರುತ್ತಿದೆ. ಈ ನಿಟ್ಟಿನಲ್ಲಿ ಉಕ್ರೇನ್ ಪ್ರಾಧಿಕಾರಗಳು ಹಾಗೂ ನೆರೆಯ ದೇಶಗಳ ಸಹಕಾರಕ್ಕೆ ಭಾರತ ಅಭಾರಿಯಾಗಿದೆ ಎಂದರು.

ರಷ್ಯಾ ಮತ್ತು ಉಕ್ರೇನ್ ಸೈನಿಕರ ನಡುವೆ ಸತತ ಘರ್ಷಣೆಗೆ ಸಾಕ್ಷಿಯಾಗಿರುವ ಸುಮಿ ನಗರದಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆಂದು ಅಂದಾಜಿಸಲಾಗಿದೆ. ಆದರೆ ಈ ನಗರದಲ್ಲಿ ನಡೆಯುತ್ತಿರುವ ಸತತ ವಾಯು ದಾಳಿಯಿಂದ ಹೆಚ್ಚಿನ ಸಹಾಯ ಒದಗಿಸುವುದು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News