ಗೋವಾದಲ್ಲಿ ತೃಣಮೂಲದ ಮಿತ್ರ ಪಕ್ಷ ಎಂಜಿಪಿಗೆ ಹೆಚ್ಚಿದ ಬೇಡಿಕೆ

Update: 2022-03-08 09:17 GMT

 ಹೊಸದಿಲ್ಲಿ: ಎಕ್ಸಿಟ್ ಪೋಲ್‌ಗಳ ಪ್ರಕಾರ ಕರಾವಳಿ ರಾಜ್ಯ ಗೋವಾದಲ್ಲಿ ಅತಂತ್ರ ವಿಧಾನಸಭೆ ಇರಲಿದೆ ಎಂದು ಗೊತ್ತಾದ ಬಳಿಕ  ತೃಣಮೂಲ ಕಾಂಗ್ರೆಸ್ ನ  ಮೈತ್ರಿಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಜೊತೆ ಮಾತುಕತೆಗೆ ಬಿಜೆಪಿ ಮುಂದಾಗಿದೆ. ಈ ಮೂಲಕ ಎಂಜಿಪಿಗೆ ಬೇಡಿಕೆ ಹೆಚ್ಚಾಗಿದೆ.

 ಮತ ಎಣಿಕೆಗೆ ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಸರಕಾರ ರಚಿಸಲು ತಮ್ಮ ಪಕ್ಷಕ್ಕೆ ಕೆಲವು ಸಂಖ್ಯಾಬಲದ ಕೊರತೆಯಾದರೆ ಬೆಂಬಲ ಪಡೆಯಲು ಕೇಂದ್ರ ಬಿಜೆಪಿ ನಾಯಕತ್ವವು ಈಗಾಗಲೇ ಎಂಜಿಪಿಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸಾವಂತ್ ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸುವುದಿಲ್ಲ ಎಂದು ಎಂಜಿಪಿ ಈ ಹಿಂದೆಯೇ ಹೇಳಿತ್ತು. ಆದಾಗ್ಯೂ, ಬಿಜೆಪಿಯೊಂದಿಗಿನ ಮೈತ್ರಿಯನ್ನು ಎಂಜಿಪಿ ತಳ್ಳಿಹಾಕಿಲ್ಲ. ಕಾಂಗ್ರೆಸ್  ಹಾಗೂ  ಆಡಳಿತಾರೂಢ ಬಿಜೆಪಿ ಎರಡೂ ಪಕ್ಷಗಳು  ನಮ್ಮನ್ನು  ಸಂಪರ್ಕಿಸಿವೆ ಎಂದು ಅದು ಹೇಳಿಕೊಂಡಿದೆ.

ಏತನ್ಮಧ್ಯೆ, ಚುನಾವಣಾ ನಂತರದ ಮೈತ್ರಿ ಬಗ್ಗೆ ನಿರ್ಧರಿಸಲು ನಾಳೆ ಎಂಜಿಪಿ-ತೃಣಮೂಲ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಿಮ ಸಂಖ್ಯೆಯ ಆಧಾರದ ಮೇಲೆ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಾದೇಶಿಕ ಪಕ್ಷ ಎಂಜಿಪಿ ಹೇಳಿದೆ.

ಪ್ರಮೋದ್ ಸಾವಂತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ದಿಲ್ಲಿಯಲ್ಲಿದ್ದಾರೆ ಗೋವಾದಲ್ಲಿ ಪಕ್ಷದ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ವಿವರಿಸಿದ್ದಾರೆ. ಸಾವಂತ್ ಅವರು ಬಿಜೆಪಿಯ ಗೋವಾ ಉಸ್ತುವಾರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಲು ಮುಂಬೈಗೆ ತೆರಳಲಿದ್ದಾರೆ.

ಗೋವಾ ಚುನಾವಣಾ ಫಲಿತಾಂಶದ ನಂತರ ಟಿಎಂಸಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಮ್ಮ ಪಕ್ಷವು ತನ್ನ ನಿಲುವನ್ನು ನಿರ್ಧರಿಸುತ್ತದೆ. ಆದರೆ ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯಾಗಿ "ಬೆಂಬಲ ನೀಡುವುದಿಲ್ಲ. ಅವರು ಮುಖ್ಯಮಂತ್ರಿಯಾದ ಬಳಿಕ  ಇಬ್ಬರು ಎಂಜಿಪಿ ಸಚಿವರನ್ನು ರಾಜ್ಯ ಸಂಪುಟದಿಂದ ಕೈಬಿಡಲಾಗಿದೆ ಎಂದು ಎಂಜಿಪಿ ನಾಯಕ  ಸುದಿನ್ ಧವಲಿಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News