ಕಾಂಗ್ರೆಸ್ ಸುಧಾರಣೆ, ಪುನಶ್ಚೇತನ ಅಗತ್ಯ: ಶಶಿ ತರೂರ್ ಪ್ರತಿಪಾದನೆ

Update: 2022-03-14 02:29 GMT

ಹೊಸದಿಲ್ಲಿ: ಕಾಂಗ್ರೆಸ್‍ನಲ್ಲಿ ಬದಲಾವಣೆಗೆ ಕರೆ ನೀಡಿರುವುದನ್ನು ಪುನರುಚ್ಚರಿಸಿದ ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್, ಪಕ್ಷದಲ್ಲಿ ಸುಧಾರಣೆ ಮತ್ತು ಪಕ್ಷದ ಪುನಶ್ಚೇತನ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ಅಗತ್ಯ ಮತ್ತು ಸಮಗ್ರ ಬದಲಾವಣೆ ತರುವಂತೆ ಅವರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ, ಸೋನಿಯಾ ನಾಯಕತ್ವದ ಪರ ನಿರ್ಣಯ ಕೈಗೊಂಡ ಬೆನ್ನಲ್ಲೇ ತಿರುವನಂತಪುರ ಸಂಸದ ತರೂರ್ ಈ ಆಗ್ರಹ ಮಂಡಿಸಿದ್ದಾರೆ.

ಕಾಂಗ್ರೆಸ್‍ನ 'ಜಿ23' ಗುಂಪಿನಲ್ಲಿ ಗುರುತಿಸಿಕೊಂಡಿರುವ ತರೂರ್, 2020ರಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಪತ್ರ ಬರೆದು ಪಕ್ಷದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು ಮತ್ತು ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿದ್ದರು.

ಇಡೀ ದೇಶದಲ್ಲಿ 1400 ಶಾಸಕರನ್ನು ಹೊಂದಿರುವ ಬಿಜೆಪಿ ಬಳಿಕ 750 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷ ಎಂದು ಟ್ವಿಟ್ಟರ್‍ನಲ್ಲಿ ಅವರು ಅಂಕಿ ಸಂಖ್ಯೆಗಳನ್ನು ನೀಡಿದ್ದು, ಈ ವಿಶ್ವಸಾರ್ಹ ರಾಷ್ಟ್ರೀಯ ವಿರೋಧ ಪಕ್ಷದ ಸುಧಾರಣೆ ಮತ್ತು ಪುನಶ್ಚೇತನ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಆ ಬಳಿಕ 15ನೇ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಬಲಪಡಿಸುವುದಷ್ಟೇ ಜಿ-23 ಗುಂಪಿನ ಉದ್ದೇಶ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News