ಭಿನ್ನಮತೀಯ ಸಂಸದರ ಅನರ್ಹತೆ ವಿಷಯದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಿದ ಪಾಕ್ ಸರಕಾರ

Update: 2022-03-21 17:33 GMT

ಇಸ್ಲಮಾಬಾದ್, ಮಾ.21: ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಸಂದರ್ಭ ನಿರ್ಣಯದ ಪರ ಮತ ಚಲಾಯಿಸುವ ಬೆದರಿಕೆ ಒಡ್ಡಿದ್ದ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಭಿನ್ನಮತೀಯ ಸಂಸದರನ್ನು ಅನರ್ಹಗೊಳಿಸಿರುವ ವಿಷಯಕ್ಕೆ ಸಂಬಂಧಿಸಿ ಸಾಂವಿಧಾನಿಕ ಅಂಶದ ಬಗ್ಗೆ ಅಭಿಪ್ರಾಯ ಕೋರಿ ಪಾಕ್ ಸರಕಾರ ಸುಪ್ರೀಂಕೋರ್ಟ್ ಗೆ ಸೋಮವಾರ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.

ವಿಪಕ್ಷ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪರ ನಿಲ್ಲುವುದಾಗಿ ಹೇಳಿಕೆ ನೀಡಿದ್ದ ಆಡಳಿತಾರೂಢ ಪಕ್ಷದ ಸುಮಾರು 24 ಸಂಸದರನ್ನು ಅನರ್ಹಗೊಳಿಸಿ ಸರಕಾರ ಆದೇಶ ಜಾರಿಗೊಳಿಸಿತ್ತು. ಈ ಕ್ರಮಕ್ಕೆ ಅವಕಾಶ ನೀಡಿರುವ ಸಂವಿಧಾನದ 63-ಎ ಪರಿಚ್ಛೇದದ ವ್ಯಾಖ್ಯಾನ ಕೋರಿ ಅಟಾರ್ನಿ ಜನರಲ್ ಖಾಲಿಕ್ ಜಾವೆದ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವಿಶ್ವಾಸ ನಿರ್ಣಯ ಸೇರಿದಂತೆ ಪ್ರಮುಖ ವಿಷಯದಲ್ಲಿ ಪಕ್ಷದ ಮುಖಂಡರ ಸೂಚನೆಯನ್ನು ಉಲ್ಲಂಘಿಸುವವರನ್ನು ಅನರ್ಹಗೊಳಿಸಲು ಈ ಪರಿಚ್ಛೇದ ಅವಕಾಶ ನೀಡಿದೆ. ಅನರ್ಹತೆಯ ಅವಧಿ ಬಗ್ಗೆ ಇಲ್ಲಿ ಉಲ್ಲೇಖವಿಲ್ಲ, ಆದರೆ ಭಿನ್ನಮತೀಯ ಸಂಸದರನ್ನು ಜೀವಾವಧಿ ಅನರ್ಹಗೊಳಿಸುವುದಾಗಿ ಪ್ರಧಾನಿ ಇಮ್ರಾನ್ಖಾನ್ ಎಚ್ಚರಿಸಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ನಡೆಸಲಿದ್ದು, ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭ ಶಾಂತಿ ಕಾಪಾಡಲು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನೂ ಏಕಕಾಲಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

 ಪಾಕಿಸ್ತಾನದಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಹಣದುಬ್ಬರ ಸಮಸ್ಯೆಗೆ ಇಮ್ರಾನ್ ನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ದುರಾಡಳಿತ ಕಾರಣವಾಗಿದೆ ಎಂದು ಆರೋಪಿಸಿ ವಿಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾರ್(ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅವಿಶ್ವಾಸ ನಿರ್ಣಯ ಮಂಡಿಸಿವೆ. 342 ಸದಸ್ಯ ಬಲದ ಸದನದಲ್ಲಿ ಪಿಟಿಐ ಪಕ್ಷ 155 ಸದಸ್ಯ ಬಲವನ್ನು ಹೊಂದಿದೆ. ಬಹುಮತಕ್ಕೆ 172 ಸದಸ್ಯರ ಬೆಂಬಲ ಅಗತ್ಯವಿದ್ದು

  ಇತರ 6 ಪಕ್ಷಗಳ 23 ಸದಸ್ಯರ ಬೆಂಬಲದಿಂದ ಸರಕಾರ ರಚಿಸಿದೆ . ಶುಕ್ರವಾರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಮ್ರಾನ್ ಸರಕಾರಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News