‘ರೆಮಲ್’ ಚಂಡಮಾರುತ ಸೋಮವಾರ ಪಶ್ಚಿಮ ಬಂಗಾಳ ಕರಾವಳಿಯನ್ನು ಅಪ್ಪಳಿಸಲಿದೆ : ಐಎಂಡಿ

Update: 2024-05-25 16:48 GMT

PC : @Indiametdept/x

ಹೊಸದಿಲ್ಲಿ : ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ವಾಯುಭಾರ ಕುಸಿತವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು,ರವಿವಾರ ಮಧ್ಯರಾತ್ರಿಯ ವೇಳೆಗೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಮುನ್ಸೂಚನೆಯನ್ನು ನೀಡಿದೆ.

ಚಂಡಮಾರುತವು ಶನಿವಾರ ಬೆಳಿಗ್ಗೆ ಬಾಂಗ್ಲಾದೇಶದ ಖೇಪುಪಾರಾದಿಂದ ದಕ್ಷಿಣಕ್ಕೆ ಸುಮಾರು 420 ಕಿ.ಮೀ.ದೂರದಲ್ಲಿ ಸ್ಥಿತಗೊಂಡಿದ್ದು,ಪ್ರತಿ ಗಂಟೆಗೆ 11 ಕಿ.ಮೀ.ವೇಗದಲ್ಲಿ ಉತ್ತರದತ್ತ ಚಲಿಸುತ್ತಿದೆ. ಸಂಜೆ ವೇಳೆಗೆ ಪ್ರಬಲ ಚಂಡಮಾರುತವಾಗಿ ರೂಪುಗೊಂಡಿದ್ದು,ರವಿವಾರ ನಸುಕಿನ ವೇಳೆಗೆ ತೀವ್ರ ಚಂಡಮಾರುತದ ಸ್ವರೂಪವನ್ನು ಪಡೆದುಕೊಳ್ಳಲಿದೆ ಎಂದು ಐಎಂಡಿ ತಿಳಿಸಿದೆ. ಚಂಡಮಾರುತಕ್ಕೆ ‘ರೆಮಲ್’ ಹೆಸರನ್ನು ನೀಡಲಾಗಿದೆ.

ಚಂಡಮಾರುತವು ಪ್ರತಿ ಗಂಟೆಗೆ 110ರಿಂದ 120 ಕಿ.ಮೀ.ವೇಗದ ಗಾಳಿಯೊಂದಿಗೆ ಪಶ್ಚಿಮ ಬಂಗಾಳದ ಸಾಗರ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪುರಾ ನಡುವೆ ಅಪ್ಪಳಿಸುವ ನಿರೀಕ್ಷೆಯಿದೆ.

ಮೇ 26-27ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮೇ 27-28ರಂದು ಮಿರೆರಮ್,ತ್ರಿಪುರಾ, ಮೇಘಾಲಯ,ದಕ್ಷಿಣ ಮಣಿಪುರ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಚಂಡಮಾರುತ ಅಪ್ಪಳಿಸುವ ಸಮಯದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, 1.5 ಮೀ.ವರೆಗೆ ಎತ್ತರದ ಅಲೆಗಳು ಸೃಷ್ಟಿಯಾಗಲಿವೆ ಮತ್ತು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಕರಾವಳಿಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳಲಿವೆ ಎಂದು ಮುನ್ಸೂಚನೆ ನೀಡಿರುವ ಐಎಂಡಿ, ಮೇ 27ರವರೆಗೆ ಉತ್ತರ ಬಂಗಾಳ ಕೊಲ್ಲಿಯಿಂದ ಹೊರಗಿರುವಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣಗಳ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಹೊರಡಿಸಿರುವ ಐಎಂಡಿ, ಮೇ 26 ಮತ್ತು ಮೇ 27ರಂದು ಪ್ರತಿ ಗಂಟೆಗೆ 100 ಕಿ.ಮೀ.ವೇಗದ ಗಾಳಿಯೊಂದಿಗೆ ಅತ್ಯಂತ ಭಾರೀ ಮಳೆಯಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದೆ. ಕೋಲ್ಕತಾ,ಹೌರಾ,ನಾಡಿಯಾ ಮತ್ತು ಪೂರ್ವ ಮೇದಿನಿಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಲಾಗಿದ್ದು,ಪ್ರತಿ ಗಂಟೆಗೆ 80ರಿಂದ 90 ಕಿ.ಮೀ.ವೇಗದ ಗಾಳಿಯೊಂದಿಗೆ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.

ರೆಮಲ್ ಈ ಋತುವಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೊದಲ ಮುಂಗಾರು ಪೂರ್ವ ಚಂಡಮಾರುತವಾಗಿದೆ. ಉತ್ತರ ಹಿಂದು ಮಹಾಸಾಗರದಲ್ಲಿ ಚಂಡಮಾರುತಗಳಿಗೆ ಪ್ರಾದೇಶಿಕ ನಾಮಕರಣ ವ್ಯವಸ್ಥೆಯಂತೆ ಓಮನ್ ಈ ಹೆಸರನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News