'ಹಿಂದೂ ಧರ್ಮೀಯಳಲ್ಲದಕ್ಕೆʼ ಕೇರಳದ ದೇವಸ್ಥಾನದಲ್ಲಿ ಭರತನಾಟ್ಯ ನರ್ತಕಿಯ ಪ್ರದರ್ಶನಕ್ಕೆ ತಡೆ
ತಿರುವನಂತಪುರ, ಮಾ.29: ಕೇರಳದ ತ್ರಿಶೂರು ಜಿಲ್ಲೆಯ ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಮುಂಬರುವ ಉತ್ಸವದ ಸಂದರ್ಭದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ ಅವರು ಎ.21ರಂದು ನೀಡಲಿದ್ದ ನೃತ್ಯ ಪ್ರದರ್ಶನವನ್ನು ಆಕೆ ಹಿಂದುಯೇತರ ಕಲಾವಿದೆ ಎಂಬ ಕಾರಣಕ್ಕೆ ಆಡಳಿತ ಮಂಡಳಿಯು ರವಿವಾರ ರದ್ದುಗೊಳಿಸಿದೆ ಎಂದು indianexpress.com ವರದಿ ಮಾಡಿದೆ.
ಮುಸ್ಲಿಮ್ ಸಮುದಾಯದಲ್ಲಿ ಜನಿಸಿರುವ ಮಾನ್ಸಿಯಾ ತನ್ನನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ 10 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಸುಮಾರು 800 ಕಲಾವಿದರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
‘ಕಲಾವಿದರನ್ನು ಅವರು ಹಿಂದುಗಳೇ ಅಥವಾ ಹಿಂದುಯೇತರರೇ ಎಂದು ನಾವು ಕೇಳಬೇಕಾಗುತ್ತದೆ. ತನಗೆ ಯಾವುದೇ ಧರ್ಮವಿಲ್ಲವೆಂದು ಮಾನ್ಸಿಯಾ ಲಿಖಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ದೇವಸ್ಥಾನದ ಸಂಪ್ರದಾಯದಂತೆ ನಾವು ನಡೆದುಕೊಂಡಿದ್ದೇವೆ ’ ಎಂದು ಕೂಡಲ್ಮಾಣಿಕ್ಯಂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ ಮೆನನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮುಂಚಿತವಾಗಿ ಕಾರ್ಯಕ್ರಮವು ನಿಗದಿಯಾಗಿದ್ದರೂ ಸರಕಾರದ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಸ್ಥಾನವು ತಾನು ಕಾರ್ಯಕ್ರಮ ನೀಡುವುದನ್ನು ನಿಷೇಧಿಸಿದೆ. ಕಾರ್ಯಕ್ರಮದ ವಿವರಗಳೊಂದಿಗೆ ಕರಪತ್ರಗಳನ್ನೂ ಮುದ್ರಿಸಲಾಗಿದೆ ಎಂದು ಮಾನ್ಸಿಯಾ ತನ್ನ ಮಾ.27ರ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ತಾನು ಹಿಂದುಯೇತರ ಆಗಿರುವುದರಿಂದ ದೇವಸ್ಥಾನದಲ್ಲಿ ಪ್ರದರ್ಶನವನ್ನು ನೀಡುವಂತಿಲ್ಲ ಎಂದು ದೇವಳದ ಪದಾಧಿಕಾರಿಯೋರ್ವರು ತನಗೆ ತಿಳಿಸಿದ್ದಾರೆ ಎಂದಿರುವ ಮಾನ್ಸಿಯಾ,ಕಲಾವಿದರಿಗೆ ಅವರ ಧರ್ಮವನ್ನು ಆಧರಿಸಿ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತಿದೆಯೇ ಹೊರತು ಅವರ ಪ್ರತಿಭೆಯನ್ನಲ್ಲ ಎಂದಿದ್ದಾರೆ.
ಕೇರಳ ಕಲಾಮಂಡಳಂನಲ್ಲಿ ಭರತನಾಟ್ಯದಲ್ಲಿ ಪಿಎಚ್ಡಿ ಅಧ್ಯಯನವ ವನ್ನು ಮಾಡುತ್ತಿರುವ ಮಾನ್ಸಿಯಾ,ವಯಲಿನ್ ವಾದಕ ಹಾಗೂ ಕಲಾವಿದ ಶ್ಯಾಮ ಕಲ್ಯಾಣ್ ಅವರನ್ನು ಮದುವೆಯಾದ ಬಳಿಕ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ದೇವಳದ ಪದಾಧಿಕಾರಿ ತನ್ನನ್ನು ಪ್ರಶ್ನಿಸಿದ್ದರು. ತನಗೆ ಧರ್ಮವಿಲ್ಲ,ತಾನು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ತನಗೆ ಇಂತಹ ಅನುಭವ ಇದೇ ಮೊದಲೇನಲ್ಲ,ಹೀಗಾಗಿ ತಾನು ವಿಚಲಿತಳಾಗಿಲ್ಲ ಎಂದು ಹೇಳಿದ ಮಾನ್ಸಿಯಾ,ರಾಜ್ಯದಲ್ಲಿಯ ಗುರುವಾಯೂರು ದೇವಸ್ಥಾನವು ಒಮ್ಮೆ ತನ್ನ ಪ್ರದರ್ಶನಕ್ಕೆ ಅವಕಾಶವನ್ನು ನಿರಾಕರಿಸಿತ್ತು ಎಂದು ಅರೋಪಿಸಿದರು. ಜಾತ್ಯತೀತ ಕೇರಳದಲ್ಲಿ ಯಾವುದೂ ಬದಲಾಗಿಲ್ಲ ಎನ್ನುವುದನ್ನು ನೆನಪಿಸಲು ದೇವಸ್ಥಾನದ ಕಾರ್ಯಕ್ರಮದಿಂದ ತನ್ನನ್ನು ನಿಷೇಧಿಸಿದ್ದನ್ನು ಫೇಸ್ಬುಕ್ನಲ್ಲಿ ದಾಖಲಿಸುತ್ತಿರುವುದಾಗಿ ತಿಳಿಸಿರುವ ಮಾನ್ಸಿಯಾ,ಕಲೆ ಮತ್ತು ಕಲಾವಿದರು ಧರ್ಮ ಮತ್ತು ಜಾತಿಯೊಂದಿಗೆ ಗುರುತಿಸಿಕೊಳ್ಳುವುದು ಮುಂದುವರಿದಿದೆ. ಒಂದು ಧರ್ಮದಲ್ಲಿ ಯಾವುದು ನಿಷೇಧಿಸಲ್ಪಟ್ಟಿದೆಯೋ ಅದು ಇನ್ನೊಂದು ಧರ್ಮದಲ್ಲಿ ಏಕಸ್ವಾಮ್ಯವಾಗಿದೆ ಎಂದಿದ್ದಾರೆ. ಶ್ಯಾಮ ಕಲ್ಯಾಣ ಅವರೂ ಫೇಸ್ಬುಕ್ನಲ್ಲಿ ತನ್ನ ಪತ್ನಿಯ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದು,ಕಲೆ ತಮ್ಮ ಧರ್ಮವಾಗಿದೆ,ತಾವು ನೃತ್ಯ ಮತ್ತು ಸಂಗೀತದ ಆರಾಧಕರಾಗಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್, ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಮಾನ್ಸಿಯಾ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡದಿರುವ ದೇವಸ್ಥಾನದ ಆಡಳಿಯ ಮಂಡಳಿಯ ನಿರ್ಧಾರವನ್ನು ಖಂಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಾನ್ಸಿಯಾ,‘ನನ್ನ ಹೆಚ್ಚಿನ ನೃತ್ಯ ಪ್ರದರ್ಶನಗಳು ದೇವಸ್ಥಾನಗಳಲ್ಲಿಯೇ ನಡೆದಿವೆ. ಒಂದು ದೇವಸ್ಥಾನದಲ್ಲಿ ಹಿಂದುಯೇತರರಿಗೆ ಒಳಗೆ ಪ್ರವೇಶವಿರಲಿಲ್ಲ,ಹೀಗಾಗಿ ಅದು ನನ್ನ ನೃತ್ಯ ಪ್ರದರ್ಶನಕ್ಕಾಗಿಯೇ ಆವರಣದ ಹೊರಗೆ ವೇದಿಕೆಯನ್ನು ನಿರ್ಮಿಸಿತ್ತು. ಇತರ ಕಲಾವಿದರು ದೇವಸ್ಥಾನದ ಒಳಗೆ ಪ್ರದರ್ಶನ ನೀಡಿದ್ದರು. ದೇವಸ್ಥಾನದ ಆಡಳಿತ ಮಂಡಳಿಯು ಕನಿಷ್ಠ ಅಷ್ಟು ಪ್ರಯತ್ನವನ್ನಾದರೂ ಮಾಡಿತ್ತು’ ಎಂದರು.
ಮಾನ್ಸಿಯಾ ಮತ್ತು ಸೋದರಿ ರುಬಿಯಾ ಭರತನಾಟ್ಯ ಕಲಾವಿದರಾಗಿರುವುದರಿಂದ 2007ರಲ್ಲಿ ತಮ್ಮ ತಾಯಿ ಅಮೀನಾ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ದಫನ್ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ನರ್ತನ ವೃತ್ತಿಯನ್ನು ಆಯ್ದುಕೊಂಡಿದ್ದಕ್ಕಾಗಿ ಮಾನ್ಸಿಯಾ ತನ್ನ ಸಮುದಾಯದಿಂದ ಬಹಿಷ್ಕಾರವನ್ನು ಎದುರಿಸಿದ್ದರು.