×
Ad

'ದಿ ಕಾಶ್ಮೀರ್ ಫೈಲ್ಸ್' ಕುರಿತ ಹೇಳಿಕೆ ವಿರೋಧಿಸಿ ಕೇಜ್ರಿವಾಲ್ ನಿವಾಸದ ಹೊರಗೆ ಬಿಜೆಪಿ ಕಾರ್ಯಕರ್ತರ ದಾಂಧಲೆ

Update: 2022-03-30 16:46 IST

ಹೊಸದಿಲ್ಲಿ: ವಿವಾದಿತ ಚಲನಚಿತ್ರ `ದಿ ಕಾಶ್ಮೀರ್ ಫೈಲ್ಸ್" ಕುರಿತಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು  ನೀಡಿದ ಹೇಳಿಕೆಯನ್ನು ಖಂಡಿಸಿ ಅವರ ನಿವಾಸದೆದುರು ಇಂದು ಬಿಜೆಪಿ ಕಾರ್ಯಕರ್ತರು ದಾಂಧಲೆ ನಡೆಸಿದ್ದೇ ಅಲ್ಲದೆ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಕಾಶ್ಮೀರಿ ಹಿಂದುಗಳ `ನರಮೇಧ'ವನ್ನು ಕೇಜ್ರಿವಾಲ್ ಅಣಕಿಸಿದ್ದಾರೆಂದು ಬಿಜೆಪಿ ನಾಯಕರು ಈಗಾಗಲೇ ಆರೋಪಿಸಿದ್ದನ್ನು  ಇಲ್ಲಿ ಸ್ಮರಿಸಬಹುದು.

ಅರವಿಂದ್ ಕೇಜ್ರಿವಾಲ್ ಅವರ ನಿವಾಸದೆದುರು ಬಿಜೆಪಿ ಕಾರ್ಯಕರ್ತರ ದಾಂಧಲೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಆಪ್ ನಾಯಕ ಹಾಗೂ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, "ಕೇಜ್ರಿವಾಲ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗದ  ಬಿಜೆಪಿ ಈಗ ಅವರನ್ನು ಕೊಲ್ಲುವ ಉದ್ದೇಶ ಹೊಂದಿದೆ" ಎಂದು ಆರೋಪಿಸಿದ್ಧಾರೆ. "ಇಲ್ಲಿ ರಾಜಕೀಯ ಕೇವಲ ನೆಪ ಮಾತ್ರ ಹಾಗೂ ಇದು ಸ್ಪಷ್ಟವಾಗಿ ಒಂದು ಕ್ರಿಮಿನಲ್ ಪ್ರಕರಣ" ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಮುಖ್ಯಮಂತ್ರಿ ನಿವಾಸ ತಲುಪಲು ಅವಕಾಶ ಮಾಡಿಕೊಡುವ ಮೂಲಕ ದಿಲ್ಲಿ ಪೊಲೀಸರು ದಾಂದಲೆ ಹಾಗೂ ಹಿಂಸೆಯನ್ನು ಉತ್ತೇಜಿಸಿದ್ದಾರೆಂದು ಹಲವಾರು ಆಪ್ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡ ದೊಡ್ಡ ಸಂಖ್ಯೆಯ ಜನರು 'ಕಾಶ್ಮೀರಿ ಪಂಡಿತರ ಅವಮಾನ' ವನ್ನು ಖಂಡಿಸುವ ಪೋಸ್ಟರ್ ಗಳನ್ನು ಹಿಡಿದುಕೊಂಡು ಸೀಎಂ ನಿವಾಸದ ಹೊರಗೆ ಇರಿಸಲಾಗಿರುವ ಬ್ಯಾರಿಕೇಡ್‍ಗಳ ಸಮೀಪ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ವೀಡಿಯೋಗಳು ಹರಿದಾಡುತ್ತಿವೆ.

ಸಮಾಜವಿರೋಧಿ ಶಕ್ತಿಗಳು ಸೀಸಿಟಿವಿ ಕ್ಯಾಮರಾಗಳನ್ನು ಹಾಗೂ ಭದ್ರತಾ ಬ್ಯಾರಿಕೇಡ್‍ಗಳಿಗೆ ಹಾನಿಯೆಸಗಿವೆ ಎಂದು ಸಿಸೋಡಿಯಾ ಹೇಳಿದ್ದಾರೆ. "ದಾಳಿಕೋರರು ಬಿಜೆಪಿ ಗೂಂಡಾಗಳಾಗಿದ್ದಾರೆ ಹಾಗೂ ದಿಲ್ಲಿ ಪೊಲೀಸರು ಅವರಿಗೆ ಸಹಾಯ ಮಾಡಿದ್ದಾರೆ" ಎಂದೂ ಅವರು ಆರೋಪಿಸಿದ್ದಾರೆ.

ಸುಮಾರು 70 ಪ್ರತಿಭಟನಾಕಾರರನ್ನು ವಶಪಡಿಸಿಕೊಳ್ಳಲಾಗಿದೆ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಆಗ್ರಹಿಸಿದಾಗ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಚಿತ್ರ ತಯಾರಕರು ಅದನ್ನು ಯುಟ್ಯೂಬ್‍ನಲ್ಲಿ ಹಾಕಿದರೆ ಎಲ್ಲರೂ ಉಚಿತವಾಗಿ ನೋಡಬಹುದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News