ಅರಳಲಾಗದೆ ಬಾಡಿ ಹೋದ ‘ಬಾಬೂಜಿ’
ಇಂದು ಬಾಬು ಜಗಜೀವನ ರಾಮ್ ಜನ್ಮದಿನ. 1984ರಲ್ಲಿ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರು ಬಾಬು ಜಗಜೀವನ ರಾಮ್ ಅವರ ಬಗ್ಗೆ ಬರೆದ ಲೇಖನ ಇಲ್ಲಿದೆ.
ಸ್ವಾತಂತ್ರ್ಯ ಹೋರಾಟದ ಕುಲುಮೆಯಲ್ಲಿ ಪಟಗೊಂಡು ದೇಶದ ಸಾರ್ವಜನಿಕ ಜೀವನವನ್ನು ಸಂಪದಗೊಳಿಸಿದ ಮುತ್ಸದ್ಧಿಗಳ ಸಣ್ಣ ಸಾಲಿನಲ್ಲಿ ಈಗಲೂ ನಮ್ಮಿಂದಿಗಿರುವ ದೊಡ್ಡ ಮನುಷ್ಯ ಬಾಬು ಜಗಜೀವನ ರಾಮ್ ಒಬ್ಬರು.
ಭಾರತದ ದ್ರಾವಿಡ ಇತಿಹಾಸದ ಸಂಕೇತ ರೂಪಿಯಾಗಿ ಕಾಣುವ ಬಹುಮುಖ ಪ್ರತಿಭೆಯ ಜಗಜೀವನ ರಾಮ್ ಒಬ್ಬ ಅಪೂರ್ವ ವ್ಯಕ್ತಿ. ಇವರ ಜೀವನ-ಸಾಧನೆಗಳ ಸಂಪುಟ ಭಾರತೀಯ ಬದುಕಿನ ಎಲ್ಲಾ ವಿಕಾರ ರೂಪುಗಳ ವಿರಾಟಪರ್ವವಾಗಬಲ್ಲುದು. ಕಲುಷಿತ ಸಾಮಾಜಿಕ ವಾತಾವರಣದಲ್ಲೂ ಕಮರಿ ಹೋಗದೆ ಅರಳಲೂ ಆಗದೆ ಬಾಡಿ ಹೋದ ಜೀವ ಇವರದು.
ದಲಿತ ಕುಟುಂಬವೊಂದರಲ್ಲಿ ಹುಟ್ಟಿದ ‘ಅಪರಾಧ’ ಇವರಿಂದ ಆಗದೆ ಇರುತ್ತಿದ್ದರೆ ಪ್ರಾಯಶಃ ಇವರಿಂದು ರಾಷ್ಟ್ರ ಪುರುಷನೋ, ಮಹಾ ನೇತಾರನೋ, ರಾಷ್ಟ್ರ ನಿರ್ಮಾಪಕನೋ, ಹೊಸತನದ ಶಿಲ್ಪಿಯೋ ಆಗಿ ಚಿತ್ರಿತವಾಗುತ್ತಿದ್ದರು. ಅಸ್ಪಶ್ಯರ ಕುಲದಲ್ಲಿ ಜನಿಸಿದ ಅಪರಾಧಕ್ಕಾಗಿ ಮನುಷ್ಯರಾಗಿ ಬದುಕಲಾಗದೆ ಕಮರಿ ಹೋದ ಪ್ರತಿಭೆಗಳು ಈ ದೇಶದಲ್ಲಿ ಅದೆಷ್ಟೋ ಇವೆ. ಜಗಜೀವನರಾಮ್ ಅಂತಹ ದುರ್ದೈವಿಗಳ ಕುಲದಲ್ಲಿ ಹುಟ್ಟಿದರೂ ದೇಶದ ಗಣ್ಯರ ಸಾಲಿಗೆ ಸೇರಿ ಉಳಿದಿರುವರೆಂಬುದೊಂದು ಕೌತುಕ.
ನಿಷ್ಠುರ ನುಡಿಯ-ನೇರನಡೆಯ ಈ ವ್ಯಕ್ತಿ ರಾಜಕೀಯವಾಗಿ ಈಗಲೂ ಎದ್ದು ಕಾಣುವ ವ್ಯಕ್ತಿಯಾಗಿದ್ದಾರೆ. ಎಪ್ಪತ್ತು ದಾಟಿದ ಈ ಮುತ್ಸದ್ದಿ ದೇಶದ ಎಂಟನೇ ಲೋಕಸಭಾ ಚುನಾವಣೆಯಲ್ಲಿ ‘ರಾಜೀವ್ ಗಾಂಧಿಯವರ ರೋಡ್‌ರೋಲರ್’ ಎದುರಿಸಿ ಗೆದ್ದು ಬಂದಿದ್ದಾರೆ. ಬಿಹಾರ ರಾಜ್ಯದ ಭೋಜಪುರ್ ಜಿಲ್ಲೆಯ ಸಂಸಾರಂ ಮತಕ್ಷೇತ್ರದಿಂದ ಸತತ ಎಂಟನೆಯ ಬಾರಿಗೆ ಇವರ ಆಯ್ಕೆಯಾಗಿದೆ. ಇವರಷ್ಟು ದೀರ್ಘ ಕಾಲ ಸಂಸತ್ ಸದಸ್ಯರಾದವರು ಬೇರೆ ಯಾರೂ ಇಲ್ಲ.
ಮೊದಲೇ ಹೇಳಿದ ಹಾಗೆ ಜಗಜೀವನ ರಾಮ್ ಬಹುಮುಖ ಪ್ರತಿಭೆಯುಳ್ಳವರು. ಇವರೊಬ್ಬ ಆದರ್ಶವಾದಿ, ಉತ್ತಮ ವಾಗ್ಮಿ, ಸಮರ್ಥ ಆಡಳಿತಗಾರ, ಹಳೆಯದನ್ನು ನೆನೆದು ಇಂದಿನ ಕಸವನ್ನು ಎಡಗಾಲಲ್ಲಿ ಮೂಡಿಸಿ ನಾಳೆಯ ಸಮಾಜದ ಸುಂದರ ಚಿತ್ರ ಬಿಡಿಸಬಲ್ಲ ರಾಜಕೀಯ ದಾರ್ಶನಿಕ. ಇಷ್ಟೆಲ್ಲ ಇದ್ದರೂ ಪ್ರತಿಭೆಗೆ ಒಟ್ಟು ಸಮಾಜದ ಪುರಸ್ಕಾರ ಸಿಗದ ನೋವನ್ನು ಉಣ್ಣುತ್ತಲೇ ಇರುವ ವ್ಯಕ್ತಿ ಇವರು. 1908ರಲ್ಲಿ ಬಿಹಾರ್ ರಾಜ್ಯದ ಭೋಜ್‌ಪುರ್ ಜಿಲ್ಲೆಯ ಚಾಂದ್ವಾ ಎಂಬ ಹಿಂದುಳಿದ ಹಳ್ಳಿಯೊಂದರಲ್ಲಿ ಹುಟ್ಟಿದವರಿವರು.
ಇವರ ತಂದೆ ಶೋಭಿರಾಮ್ ಮತ್ತು ತಾಯಿ ಇಂದ್ರಾಣಿದೇವಿ ವ್ಯವಸಾಯ ಕೂಲಿಗಾರರು. ಆಕಸ್ಮಿಕವಾಗಿ ಶಾಲೆಗೆ ಸೇರಿದ ಜಗಜೀವನರಾಮ್ ಆ ಹಳ್ಳಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಎಲ್ಲರ ಗಮನ ಸೆಳೆದರಂತೆ. ಆ ದಿನಗಳಲ್ಲಿ ಇವರ ಪ್ರತಿಭೆಯನ್ನು ಮನ್ನಿಸಿ ಪ್ರೋತ್ಸಾಹದ ನೀರೆರೆದವರು ಇದ್ದರು. ಹೀಗಾಗಿ ಇವರ ಪ್ರತಿಭೆ ಬೆಳೆಯಲು ಅವಕಾಶ ದೊರಕಿತು. ಸ್ವಾತಂತ್ರ್ಯ ಹೋರಾಟದ ಆದರ್ಶಗಳ ಹಿತಗಾಳಿಯಲ್ಲಿ ಇವರು ಉಸಿರಾಡಿ ಚೇತರಿಸಿಕೊಂಡರು.
ಹುಟ್ಟಿನಿಂದ ಬಂದ ಅಸ್ಪೃಶ್ಯತೆ ಇವರ ವ್ಯಕ್ತಿತ್ವದ ವಧೆ ಮಾಡದಂತೆ ನೋಡಿಕೊಳ್ಳುವ ಬುದ್ಧಿಬಲ ಆತ್ಮಶುದ್ಧಿ ಇವರಲ್ಲಿತ್ತು. ಇವರು ಬಿಹಾರದ ವ್ಯವಸಾಯ ಕೂಲಿಗಾರರ ಸಂಘಟನೆಯ ಕಾರ್ಯವನ್ನು ಕೈಗೆತ್ತಿಕೊಂಡರು. ಈ ಮೂಲಕ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಬಾಬೂ ಜಗಜೀವನರಾಮ್ ಅನತಿಕಾಲದಲ್ಲೇ ಕಾರ್ಮಿಕ ನಾಯಕರಾದರು. ತಾನೊಬ್ಬ ‘ದಲಿತ’ ಎಂಬ ಕೀಳರಿಮೆ ತಮ್ಮ ಸನಿಹಕ್ಕೆ ಬರಗೊಡದ ಇವರು ಸವರ್ಣೀಯರ ಅಸಹನೆ ತಮ್ಮನ್ನು ತುಳಿಯದಂತೆ ನೋಡಿಕೊಳ್ಳುವ ವರ್ಚಸ್ಸನ್ನು ಬೆಳೆಸಿಕೊಂಡಿದ್ದರು.
ಮೂವತ್ತೆರಡನೇ ವಯಸ್ಸಿನಲ್ಲೇ ಇವರು ಬಿಹಾರ ರಾಜ್ಯದ ಗಣ್ಯ ನಾಯಕರಲ್ಲಿ ಒಬ್ಬರೆನಿಸಿದರು. ಬಿಹಾರ ಪ್ರಾಂತ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. ಇಂದಿಗೂ ದಲಿತರನ್ನು ಜಾನುವಾರುಗಳಂತೆ ನಡೆಸಿಕೊಳ್ಳುತ್ತಿರುವ ಬಿಹಾರದ ಭೂಮಿಹಾರರು ಮತ್ತು ಹಾರುವರ ನಡುವೆ ತಲೆ ಎತ್ತಿ ಬದುಕುವ ಬಲ ಗಳಿಸಿದ ಜಗಜೀವನ್ ರಾಮ್ ಒಬ್ಬ ಅಸಾಧಾರಣ ಶಕ್ತಿ.
ಇವರ ಶಕ್ತಿಯನ್ನು 1946ರಲ್ಲಿ ಜವಾಹರಲಾಲ್ ನೆಹರೂ ಗುರುತಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ಆಗಮಿಸಿದ್ದ ಬ್ರಿಟಿಷ್ ಕ್ಯಾಬಿನೆಟ್ ಸಾಕ್ಷ್ಯ ನೀಡಿದ ಗಣ್ಯರಲ್ಲಿ ಇವರೊಬ್ಬರು, ಅದೇ ವರ್ಷ ಇವರು ರಾಜ್ಯಾಂಗ ಸಭೆಯ ಸದಸ್ಯರಾದರು. ಅಂದಿನಿಂದ ಇಂದಿನ(30-12-1984)ವರೆಗೂ ಈ ಸಂಸತ್ ಸದನದ ಸದಸ್ಯರಾಗಿ ಉಳಿದವರು ಜಗಜೀವನ ರಾಮ್ ಒಬ್ಬರೇ.
1946ರಲ್ಲಿ ನೆಹರೂ ಸಂಪುಟಕ್ಕೆ ಇವರನ್ನು ಸೇರಿಸಿಕೊಂಡಾಗ ಪ್ರಚಾರ ಮಾಧ್ಯಮದಲ್ಲಿ ಹಲವಾರು ಕಥೆಗಳನ್ನು ಹೆಣೆಯಲಾಯಿತು. ಅದಾಗಲೇ ದೇಶದ ದಲಿತ ಸಮೂಹದ ಅಪ್ರತಿಮ ನಾಯಕರಾಗಿದ್ದ ‘ಡಾ. ಬಿ.ಆರ್. ಅಂಬೇಡ್ಕರರಿಗೆ ಎದುರಾಳಿಯಾಗಿ ಜಗಜೀವನರಾಮ್ ಅವರನ್ನು ಬೆಳೆಸಲಾಗುತ್ತಿದೆ’ ಎಂಬುದೊಂದು, ಅನ್ಯರನ್ನು ಅಳಿಸಲು ಈ ವ್ಯಕ್ತಿ ಒಂದು ಅಸ್ತ್ರವಾಗಿರುವರೇ ಹೊರತು ಸ್ವಂತ ಶಕ್ತಿ ಇರುವವರಲ್ಲ ಎಂಬ ವಿಕೃತ ಚಿತ್ರ ಬಿಡಿಸುವುದು ಪತ್ರಿಕಾ ಮಾಧ್ಯಮದ ಉದ್ದೇಶವಾಗಿತ್ತು.
ಆದರೆ ಸ್ವಂತ ವಿಚಾರ ಹಾಗೂ ಸ್ವತಂತ್ರ ವ್ಯಕ್ತಿತ್ವವಿರುವ ಜಗಜೀವನರಾಮ್ ಯಾರದೇ ತಾಳಕ್ಕೆ ಕುಣಿವ ಗೊಂಬೆಯಾಗಲಿಲ್ಲ. ತಮ್ಮ ಅನಿಸಿಕೆಗೆ ಅನ್ಯರನ್ನೊಲಿಸಿಕೊಳ್ಳದ ಮೇಧಾವಿಯೆಂಬುದನ್ನು ತೋರಿಸಿದರು. ನೆಹರೂ ಸಂಪುಟದ ಸಚಿವರಾಗಿದ್ದು ವಹಿಸಿಕೊಂಡ ಹೊಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ರಾಜಕೀಯವಾಗಿ ಬೆಳೆದರು.
ಆದರೂ ದೇಶದ ಪತ್ರಿಕಾ ಮಾಧ್ಯಮ ಇವರ ರಾಜಕೀಯ ವ್ಯಕ್ತಿತ್ವದ ಸ್ವಂತಿಕೆಯನ್ನು ಮನ್ನಿಸಲಿಲ್ಲ. ಸ್ವತಂತ್ರ ಭಾರತದ ಆಡಳಿತ ಶಿಲ್ಪಿಗಳಲ್ಲಿ ಅವರೊಬ್ಬರೆಂಬುದನ್ನು ಗುರುತಿಸಲಿಲ್ಲ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಗಣ್ಯರಲ್ಲಿ ಒಬ್ಬರಾಗಿ ಉಳಿದ ಇವರನ್ನು ಪತ್ರಿಕಾ ಮಾಧ್ಯಮ ಹರಿಜನ ಮುಖಂಡನೆಂದೇ ಕರೆಯಿತು. ಹುಟ್ಟಿನಿಂದ ಬಂದ ಶಾಪವನ್ನು ಮೆಟ್ಟಿ ಮುನ್ನಡೆವ ಬುದ್ಧಿ ಬಲ, ಆತ್ಮಶಕ್ತಿ ಇದ್ದರೂ ಸಾಮಾಜಿಕ ವ್ಯವಸ್ಥೆಯ ಪರಿಪಾಲಕರಾದ ಪತ್ರಕರ್ತರು ಇವರನ್ನು ರಾಷ್ಟ್ರೀಯ ಮುಖಂಡರ ಸಾಲಿಗೆ ಸೇರಿಸಲಿಲ್ಲ. ದಲಿತರಾಗಿ ಹುಟ್ಟಿದ್ದೇ ಅವರ ಅಪರಾಧವಾಯಿತು.
ಬಾಬೂ ಜಗಜೀವನ ರಾಮ್ ಭಾರತದ ಒಬ್ಬ ಸಮರ್ಥ ಆಡಳಿತಗಾರ ಹಾಗೂ ಮಹಾ ಮುತ್ಸದ್ದಿ ಎಂಬುದನ್ನು ವಿದೇಶಗಳ ಪತ್ರಕರ್ತರು ಗುರುತಿಸಿದ್ದರು. 1957ರಿಂದ 62ರ ಅವಧಿಯಲ್ಲಿ ಇವರು ರೈಲ್ವೆ ಮಂತ್ರಿಯಾಗಿದ್ದಾಗ ಬಹಳ ಕಾಲ ಹಳಿ ತಪ್ಪಿಯೇ ಚಲಿಸುತ್ತಿದ್ದ ಇಲಾಖೆಯನ್ನು ಹಿಡಿದೆಳೆದು ಹಳಿಯ ಮೇಲೆ ಹಾಕಿದ್ದರು. ಅವರ ಈ ಸಾಧನೆಯನ್ನು ಮೆಚ್ಚಿದ ಅಮೆರಿಕನ್ ಪತ್ರಕರ್ತರೊಬ್ಬರು ‘ಟೈಮ್’ ವಾರಪತ್ರಿಕೆಯಲ್ಲಿ ವಿಶೇಷ ಲೇಖನವೊಂದನ್ನು ಬರೆದರು. ನೆಹರೂ ನಂತರ ಯಾರು? ಎಂಬ ಪ್ರಶ್ನೆಗೆ ಉತ್ತರವಾಗಿ ಈ ಪತ್ರಕರ್ತ ಜಗಜೀವನರಾಮ್ ಹೆಸರು ಪ್ರಸ್ತಾಪಿಸಿದರು.
ಜಗಜೀವನರಾಮ್ ಹುಟ್ಟಿರುವ ಹಿಂದೂ ಸಮಾಜ ಮುಕ್ತವಾದುದಲ್ಲ ವೆಂಬುದರ ಆಳ ಅರಿವು ಆ ಅಮೆರಿಕನ್ ಪತ್ರಕರ್ತನಿಗೆ ಇರಲಿಲ್ಲ. ಅಂದಿನಿಂದ ಭಾರತದ ಸಾಮಾಜಿಕ ವ್ಯವಸ್ಥೆಯ ಪರಿಪಾಲಕರಾದ ಪತ್ರಕರ್ತ ಪಿಶಾಚಿಗಳ ಕಣ್ಣು ಬಾಬೂಜಿ ಮೇಲೆ ಬಿತ್ತು. ‘ಸವರ್ಣೀಯರ ಸ್ವರ್ಗ’ವಾದ ಭಾರತದಂತಹ ದೇಶದ ಪ್ರಧಾನಿ ಪಟ್ಟಕ್ಕೆ ಅಸ್ಪಶ್ಯನ ಹೆಸರು ಸೂಚಿತವಾದದ್ದನ್ನು ಸಹಿಸಲು ಇದರಿಂದಾಗಲಿಲ್ಲ. ದೇಶದ ಎಲ್ಲ ದೊಡ್ಡ ಪತ್ರಿಕಾಲಯಗಳಲ್ಲಿ ಮೂಲಗೇಣಿ ಹಕ್ಕು ಪಡೆದ ಈ ಪತ್ರಕರ್ತರ ಸಮೂಹ ಜಗಜೀವನರಾಮರ ಖಾಸಗಿ ಜೀವನದ ಫೈಲಿಗೆ ಕೈಹಾಕಿತು.
ಪರಿಣಾಮವಾಗಿ 1963ರಲ್ಲಿ ಅವರ ವಿರುದ್ಧ ಆದಾಯ ತೆರಿಗೆಯ ದಾಖಲೆ ಪತ್ರ ಸಲ್ಲಿಸಿಲ್ಲವೆಂಬ ಅಪವಾದ ಬಂತು. ಸಾಮಾನ್ಯವಾಗಿ ಅನೇಕರಿಂದಾಗುವ ಈ ಅಚಾತುರ್ಯಕ್ಕೆ ದೇಶದ ಎಲ್ಲಾ ಪತ್ರಿಕೆಗಳು ಭೂತಕನ್ನಡಿ ಹಿಡಿದವು. ಜಗಜೀವನರಾಮ್ ಬಗ್ಗೆ ಎಲ್ಲ ಸವರ್ಣೀಯರು ನಾಲಿಗೆ ಸಡಿಲು ಬಿಟ್ಟರು. ಅವರ ತೇಜೋವಧೆ ಮಾಡಿದರು. ಮತ್ತೆ ಎಂದೆಂದೂ ದೇಶದ ಪ್ರಧಾನಿ ಪಟ್ಟಕ್ಕೆ ಅವರ ಹೆಸರು ಸೂಚಿತವಾಗದಂತೆ ಮಾಡಿದರು.
ವ್ಯವಸ್ಥೆಯ ಈ ಅಮಾನುಷ ಇರಿತದಿಂದ ಬಾಬೂಜಿ ಬಹುವಾಗಿ ನೊಂದಿ ದ್ದರು. ಈ ನೋವು ಒಮ್ಮೆಮ್ಮೆ ಅವರಿಂದ ಭಾರತೀಯ ಸಮಾಜದ ಬಗ್ಗೆ ಕಟು ಮಾತುಗಳನ್ನಾಡಿಸಿದ್ದುಂಟು. ಈಗ ಅವರಿಗುಳಿದಿರುವುದು ನೋವು ಒಂದೇ.
30-12-1984