ಜೆಎನ್‍ಯು ಹಿಂಸಾಚಾರ: ಅಪರಿಚಿತ ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿದ ದಿಲ್ಲಿ ಪೊಲಿಸರು

Update: 2022-04-11 10:16 GMT

 ಹೊಸದಿಲ್ಲಿ: ರಾಜಧಾನಿಯ ಜವಾಹರಲಾಲ್ ನೆಹರೂ ಕ್ಯಾಂಪಸ್ಸಿನಲ್ಲಿ ರವಿವಾರ  ಸಂಜೆ ನಡೆದ ಹಿಂಸಾತ್ಮಕ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡ ಮರುದಿನ ದಿಲ್ಲಿ ಪೊಲೀಸರು  ಎಬಿವಿಪಿಗೆ ಸೇರಿದ ಹಲವಾರು ಗುರುತು ಪತ್ತೆಹಚ್ಚಲಾಗಿಲ್ಲದ ವಿದ್ಯಾರ್ಥಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ತಮಗೆ ಜೆಎನ್‍ಯುಎಸ್‍ಯು, ಎಸ್‍ಎಫ್‍ಐ, ಡಿಎಸ್‍ಎಫ್ ಮತ್ತು ಎಐಎಸ್‍ಎ ಗೆ ಸಂಯೋಜಿತ ವಿದ್ಯಾರ್ಥಿಗಳ ಒಂದು ಗುಂಪಿನಿಂದ ಇಂದು ಮುಂಜಾನೆ ದೂರು ಬಂದ ಆಧಾರದಲ್ಲಿ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 323,341, 509, 506 ಮತ್ತು 34 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ಪೊಲೀಸರು ಹೇಳುತ್ತಿದ್ದರೆ, ಎಡಪಂಥೀಯರ ಪ್ರಕಾರ ಈ ಸಂಖ್ಯೆ 50ರಿಂದ 60 ಆಗಿದೆ. ಎಬಿವಿಪಿ ಹೇಳುವಂತೆ ಅದರ 8-10 ಕಾರ್ಯಕರ್ತರು ಸೇರಿದಂತೆ 15-20 ಮಂದಿ ಗಾಯಗೊಂಡಿದ್ದಾರೆ.

ಎಡಪಂಥೀಯ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ಪ್ರಕಾರ ಕಾವೇರಿ ಹಾಸ್ಟೆಲ್ ಮೆಸ್‍ನಲ್ಲಿ ಮಾಂಸಾಹಾರಿ ಆಹಾರ ತಯಾರಿಸುವುದಕ್ಕೆ ಎಬಿವಿಪಿ ವಿದ್ಯಾರ್ಥಿಗಳು  ತಡೆ ಹೇರಿದ್ದರು. "ಪ್ರತಿ ಭಾನುವಾರ ಎಲ್ಲಾ ಹಾಸ್ಟೆಲ್‍ಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆ ಸಿದ್ಧವಾಗುತ್ತದೆ. ಆದರೆ ಕಾವೇರಿ ಹಾಸ್ಟೆಲ್ ಸಮೀಪ ಎಬಿವಿಪಿ ವಿದ್ಯಾರ್ಥಿಗಳು ಯಾವುದೋ ಕಾರ್ಯಕ್ರಮ ನಡೆಸುತ್ತಿದ್ದರು ಆ ಸಂದರ್ಭ ಕೋಳಿಮಾಂಸ ಸರಬರಾಜು ಮಾಡುವವರು ಅಲ್ಲಿಗೆ ಆಗಮಿಸಿದಾಗ ಆವರನ್ನು ತಡೆದು ಅವರನ್ನು ಹಾಗೂ ಮೆಸ್ ಕಾರ್ಯದರ್ಶಿ ಅವರಿಗೆ ಕಿರುಕುಳ ನೀಡಿ ಅಲ್ಲಿ ಹವನ ನಡೆಯುತ್ತಿದೆ ಹಾಗೂ ಮಾಂಸಾಹಾರಿ ಆಹಾರ ತಯಾರಿಸುವಂತಿಲ್ಲ" ಎಂದು ಹೇಳಲಾಯಿತು ಎಂದು ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಕೌನ್ಸಿಲರ್ ಅನಘಾ ಪ್ರದೀಪ್ ಹೇಳಿದ್ದಾರೆ.

ಆದರೆ ರಾಮ ನವಮಿ ಪೂಜೆಗೆ ಅಡ್ಡಿಯುಂಟು ಮಾಡಲು ಯತ್ನಿಸಲಾಗಿತ್ತು ಎಂದು ಎಬಿವಿಪಿ ಸದಸ್ಯರು ಹೇಳಿದ್ದಾರಲ್ಲದೆ ಮಾಂಸಾಹಾರಿ ಆಹಾರ ಇಲ್ಲಿ ಸಮಸ್ಯೆಯಾಗಿರಲಿಲ್ಲ ಎಂದಿದ್ದಾರೆ. ``ಕಾವೇರಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳು ರಾಮ ನವಮಿ ಹವನ ನಡೆಸುತ್ತಿದ್ದಾಗ ಅದನ್ನು ತಡೆಯಲು ಎಡಪಂಥೀಯರು ಪ್ರಯತ್ನಿಸುತ್ತಿದ್ದರು. 3.30ಗೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮ ಇದರಿಂದಾಗಿ 5 ಗಂಟೆಗೆ ಆರಂಭಗೊಂಡಿತು. ಯಾರೂ ಮಾಂಸಾಹಾರವನ್ನು ವಿರೋಧಿಸಿಲ್ಲ, ಅದನ್ನೊಂದು ನೆಪವಾಗಿಸಲಾಗಿದೆ. ಹಾಸ್ಟೆಲ್‍ನಲ್ಲಿ ಇಫ್ತಾರ್ ಕೂಟ ಮತ್ತು ಹವನ ನಡೆಯುತ್ತಿದ್ದರೂ ಯಾವುದೇ ಸಮಸ್ಯೆಯಿರಲಿಲ್ಲ,'' ಎಂದು ಎಬಿವಿಪಿ ಸಂಯೋಜಿತ ವಿದ್ಯಾರ್ಥಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News