×
Ad

ದೇಶದ ಬೆಳವಣಿಗೆಯಲ್ಲಿ ಐಟಿಐ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು : ಅಂಡಾರು ದೇವಿಪ್ರಸಾದ್ ಶೆಟ್ಟಿ

Update: 2022-04-21 21:00 IST

ಉಡುಪಿ : ದೇಶದ ಬೆಳವಣಿಗೆಯಲ್ಲಿ ಕೈಗಾರಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿ ಐಟಿಐ ತರಬೇತಿ ಹೊಂದಿದ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಉಲ್ಲೇಖನೀಯ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಇಂದು ಮಣಿಪಾಲ ಪ್ರಗತಿನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಮಂತ್ರಾಲಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉಡುಪಿ ಹಾಗೂ ಸರಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಹಯೋಗ ದೊಂದಿಗೆ ನಡೆದ ರಾಷ್ಟ್ರಮಟ್ಟದ ಐಟಿಐ ಅಪ್ರೆಂಟಿಸ್‌ಶಿಪ್ ಮೇಳ -೨೦೨೨ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಒಟ್ಟಾರೆ ವ್ಯವಸ್ಥೆಗೆ ಅಗತ್ಯವಾಗಿರುವ ಅನುಭವಿ, ಕುಶಲಕರ್ಮಿಗಳಲ್ಲಿ ಶೇ.೮೦ರಷ್ಟು ಮಂದಿಯನ್ನು ನೀಡುವುದು ಐಟಿಐ ಕಾಲೇಜುಗಳು. ಐಟಿಐ ಕಾಲೇಜುಗಳಲ್ಲಿನ ತರಬೇತಿ ಅವಧಿಯಲ್ಲಿ ಹೆಚ್ಚು ಅವಧಿಯನ್ನು ಪ್ರಾಯೋಗಿಕ ತರಗತಿಗಳಿಗೆ ನೀಡುವುದರಿಂದ, ಸಹಜವಾಗಿ ಅಲ್ಲಿ ಕಲಿತ ವಿದ್ಯಾರ್ಥಿಗಳು ವೃತ್ತಿ ಯಲ್ಲಿ ನಿಪುಣತೆ ಗಳಿಸಿರುವುದರಿಂದ ಅವರಿಗೆ ಹೆಚ್ಚು ಅವಕಾಶಗಳು ದೊರಕುತ್ತದೆ ಎಂದವರು ಅಭಿಪ್ರಾಯಪಟ್ಟರು.

ಹಿರಿಯ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ  ತರಗತಿಯ ಪಾಠಗಳಿಗೆ  ಸೀಮಿತವಾಗಿರದೇ, ಜೊತೆಗೆ ಸಾಮಾನ್ಯ ಜ್ಞಾನ, ವ್ಯಾವಹಾರಿಕ ಜ್ಞಾನ ಹೊಂದಿರಬೇಕು. ಇದು ನಂತರದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ. ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವುದರ ಜೊತೆಗೆ ಉದ್ಯೋಗ ಕಲ್ಪಿಸಿ ಕೊಡುವಲ್ಲಿಯೂ ನೆರವಾಗಬೇಕು ಎಂದರು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ -ಐಎಂಸಿ-ಅಧ್ಯಕ್ಷ ವಿಶ್ವನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ಉಡುಪಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ಸ್ವಾಗತಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿ ಸತೀಶ್ ಎಸ್. ವಂದಿಸಿದರು.

ಶಿಶಿಕ್ಷು ಮೇಳದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬೇರೆ ಬೇರೆ ಕ್ಷೇತ್ರದ ಉದ್ಯೋಗದಾತರು, ಕಾರ್ಖಾನೆ ಹಾಗೂ ಕಂಪೆನಿಗಳು ಆಗಮಿಸಿದ್ದವು. ಜಿಲ್ಲೆಯ ವಿವಿಧ ಐಟಿಐಗಳ ನೂರಾರು ವಿದ್ಯಾರ್ಥಿಗಳು ನೊಂದಣೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News