31 ಪೈಸೆ ಸಾಲ ಬಾಕಿ ಎಂದು ಪ್ರಮಾಣಪತ್ರ ತಡೆ ಹಿಡಿದ ಎಸ್‍ಬಿಐ ಗೆ ಹೈಕೋರ್ಟ್ ತರಾಟೆ

Update: 2022-04-28 07:04 GMT

ಅಹ್ಮದಾಬಾದ್:  ಕೇವಲ 31 ಪೈಸೆ ಸಾಲ ಬಾಕಿ ಪಾವತಿಸಿಲ್ಲ ಎಂಬ ಕಾರಣಕ್ಕೆ ರೈತರೊಬ್ಬರಿಗೆ ಯಾವುದೇ ಬಾಕಿಯಿಲ್ಲ ಪ್ರಮಾಣಪತ್ರವನ್ನು ತಡೆಹಿಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ವನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬೆಳೆ ಸಾಲವನ್ನು ಮರುಪಾವತಿಸಿದ ನಂತರ ಜಮೀನು ಒಪ್ಪಂದವೊಂದನ್ನು ಮಾಡಲು ರೈತರೊಬ್ಬರಿಗೆ ಈ ಪ್ರಮಾಣಪತ್ರ ಬೇಕಾಗಿತ್ತು ಎಂದು timesofindia ವರದಿ ಮಾಡಿದೆ.

ಆದರೆ ಆತ 31 ಪೈಸೆ ಸಾಲ ಬಾಕಿ ಮರುಪಾವತಿಸಿಲ್ಲದೇ ಇರುವುದರಿಂದ ಆತನ ಜಮೀನಿನ ಮೇಲಿನ ಬ್ಯಾಂಕಿನ ಹಕ್ಕು ತೆಗೆದುಹಾಕಲಾಗಿಲ್ಲ ಎಂದು ನ್ಯಾಯಾಲಯದಲ್ಲಿ ಬ್ಯಾಂಕ್ ವಾದಿಸಿತ್ತು.

ಇದು ಅತಿಯಾಯಿತು, ಇಷ್ಟು ಸಣ್ಣ ಮೊತ್ತಕ್ಕೆ ಒಂದು ಪ್ರಮಾಣಪತ್ರವನ್ನು ತಡೆಹಿಡಿಯಲಾಗಿರುವುದು ಕಿರುಕುಳವಲ್ಲದೆ ಮತ್ತಿನ್ನೇನಲ್ಲ ಎಂದು ನ್ಯಾಯಾಲಯ ಹೇಳಿದೆ.

"31 ಪೈಸೆ ಬಾಕಿ? 50 ಪೈಸೆಗಿಂತ ಕಡಿಮೆ ಇರುವ ಏನನ್ನಾದರೂ ನಿರ್ಲಕ್ಷ್ಯಿಸಬಹುದೆಂದು ನಿಮಗೆ ತಿಳಿದಿದೆಯೇ?,'' ಎಂದು ನ್ಯಾಯಾಧೀಶ ಭಾರ್ಗವ್ ಕರಿಯಾ ಪ್ರತಿಕ್ರಿಯಿಸಿದರಲ್ಲದೆ ಈ ಕುರಿತಂತೆ ಅಫಿಡವಿಟ್ ಸಲ್ಲಿಸುವಂತೆ ಬ್ಯಾಂಕಿಗೆ ಸೂಚಿಸಿ ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ನಿಗದಿಪಡಿಸಿದ್ದಾರೆ.

ಈ ಪ್ರಕರಣದಲ್ಲಿ ರಾಕೇಶ್ ವರ್ಮ ಮತ್ತು ಮನೋಜ್ ವರ್ಮ ಎಂಬವರು ಖೋರಜ್ ಗ್ರಾಮದಲ್ಲಿ ಶಾಮ್‍ಜಿಭಾಯಿ ಪಾಶಾಭಾಯಿ ಎಂಬವರಿಂದ ಜಾಗ ಖರೀದಿಸಿದ್ದರು. ಪಾಶಾಭಾಯಿ ಕುಟುಂಬ ಈ ಹಿಂದೆ ಬೆಳೆ ಸಾಲ ಪಡೆದಿತ್ತು, ಆದರೆ ಸಾಲ ಮರುಪಾವತಿಗಿಂತ ಮುನ್ನವೇ ಜಮೀನು ಮಾರಾಟ ಮಾಡಲಾಗಿತ್ತು ಇದರಿಂದಾಗಿ ಜಮೀನಿನ ಮೇಲೆ ಬ್ಯಾಂಕ್ ಶುಲ್ಕ ವಿಧಿಸಿತ್ತು ಹಾಗೂ ಹೊಸ ಮಾಲೀಕರ ಹೆಸರುಗಳನ್ನು ಭೂ ದಾಖಲೆಗಳಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. ಪ್ರಮಾಣಪತ್ರ ಪಡೆಯಲು ಖರೀದಿದಾರರು ಸಂಬಂಧಿತ ಶುಲ್ಕ ಪಾವತಿಸಲು ಮುಂದೆ ಬಂದಿದ್ದರು.

ಆದರೆ ಯಾವುದೇ ಪ್ರಗತಿಯಾಗದೇ ಇದ್ದಾಗ ಅವರು 2020ರಲ್ಲಿ ಹೈಕೋರ್ಟ್ ಕದ ತಟ್ಟಿದ್ದರು. ಈ ನಡುವೆ ಸಾಲ  ಮರುಪಾವತಿಯಾದರೂ ಬ್ಯಾಂಕ್ ಪ್ರಮಾಣಪತ್ರ ನೀಡಿರದೇ ಇದ್ದುದರಿಂದ ಜಮೀನು ಹಸ್ತಾಂತರ ಸಾಧ್ಯವಾಗಿರಲಿಲ್ಲ. ಈ ಕುರಿತು ನ್ಯಾಯಾಲಯ ಪ್ರಶ್ನಿಸಿದಾಗ 31 ಪೈಸೆ ಬಾಕಿ ವಿಚಾರವನ್ನು ಬ್ಯಾಂಕ್ ಪ್ರಸ್ತಾಪಿಸಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News