ಮೂಲಭೂತ ಸೌಕರ್ಯ ಒದಗಿಸಿ

Update: 2022-04-29 18:17 GMT

ಮಾನ್ಯರೇ,

ರಾಜ್ಯದಲ್ಲಿ ಐಟಿ-ಬಿಟಿ ಕಂಪೆನಿಗಳಿಗೆ ಬೆಂಬಲಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಸರ್ವ ರೀತಿಯ ಸೌಲಭ್ಯ ಒದಗಿಸುತ್ತಿರುವುದು ಸ್ವಾಗತಾರ್ಹ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬರುವ ಕಂಪೆನಿಗಳಿಗೆ ಸರಕಾರ ಸಕಲ ಸೌಲಭ್ಯದ ಸಹಕಾರ ನೀಡುತ್ತಿದೆ. ಐಟಿ-ಬಿಟಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾವೀನ್ಯತಾ ಕ್ಲಸ್ಟರ್‌ಗಳನ್ನು ಸೃಷ್ಟಿಸುವುದು, ಸಂಶೋಧನೆ, ಜಾಗತಿಕ ಮಟ್ಟದ ಅತ್ಯುನ್ನತ ಸಂಶೋಧನಾ ವಲಯಗಳನ್ನು ಆಕರ್ಷಿಸಲು, ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವ ಯೋಜನೆ ಹಮ್ಮಿಕೊಂಡಿದೆ. ಐಟಿ-ಬಿಟಿ, ವಿವಿಧ ವಲಯಗಳ ಕಂಪೆನಿಗಳಿಗೆ ಸರಕಾರವು ಸದಾ ಸಹಕಾರ ನೀಡಿ ಮುನ್ನಡೆಸುತ್ತಿದೆ. ಕೈಗಾರಿಕಾ ನೀತಿಗಳಲ್ಲಿ ಬದಲಾವಣೆ, ನಿಯಮಗಳ ಸರಳೀಕರಣ, ಕೌಶಲ್ಯವುಳ್ಳ ಮಾನವ ಸಂಪನ್ಮೂಲ ಒದಗಿಸಿಕೊಡುವ ನಿಟ್ಟಿನಲ್ಲಿ ಸರಕಾರವು ಈಗಾಗಲೇ ಐಟಿ-ಬಿಟಿ ವಲಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವುದರ ಬಗ್ಗೆ ಐಟಿ-ಬಿಟಿ ಕಂಪೆನಿಗಳ ಸಿಇಒಗಳ ಜೊತೆಗಿನ ಸಂವಾದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ಭರವಸೆ ನೀಡಿರುವರು. ಇದರಿಂದ ರಾಜ್ಯದಲ್ಲಿ ಐಟಿ-ಬಿಟಿ ಕಂಪೆನಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ಬರಲು ಈ ಪ್ರೋತ್ಸಾಹವು ಅವಕಾಶ ಮಾಡಿಕೊಡಲಿದ್ದು. ರಾಜ್ಯದಲ್ಲಿ ಐಟಿ-ಬಿಟಿ ಅಭಿವೃದ್ಧಿಗಾಗಿ ಈ ಸಾಲಿನ ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ವಿಶೇಷವಾಗಿದೆ. 'ಬಿಯಾಂಡ್ ಬೆಂಗಳೂರು' ಯೋಜನೆಯಡಿ ರಾಜ್ಯದ ತುಮಕೂರು, ಮೈಸೂರು, ಹುಬ್ಬಳ್ಳಿ ಇನ್ನಿತರ ನಗರಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ. ರಾಜ್ಯಾದ್ಯಂತ ಐಟಿ-ಬಿಟಿ ಕಂಪೆನಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮತ್ತು ಬಂಡವಾಳ ಹೂಡಿಕೆ ಮಾಡಿ ಕಂಪೆನಿಗಳನ್ನು ಸ್ಥಾಪನೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ, ರಾಜ್ಯ ಸರಕಾರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಐಟಿ-ಬಿಟಿ ಕಂಪೆನಿಗಳಿಗೆ ಸರ್ವ ಸೌಲಭ್ಯ ನೀಡಿ ಉದ್ಯಮಸ್ನೇಹಿಗೆ ಮಹತ್ವ ನೀಡುತ್ತಿರುವುದು ಸೂಕ್ತವಾಗಿದೆ. ಇದರಿಂದ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ.
 

Writer - ಆರ್.ಬಿ.ಜಿ.ಘಂಟಿ, ಬಾಗಲಕೋಟೆ

contributor

Editor - ಆರ್.ಬಿ.ಜಿ.ಘಂಟಿ, ಬಾಗಲಕೋಟೆ

contributor

Similar News