ತುಳುನಾಡಿನ ದೈವಗಳು ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯ ಪ್ರತೀಕ

Update: 2022-05-06 17:57 GMT

ಮಾನ್ಯರೇ,

ತುಳುನಾಡಿನ ಸಾಂಸ್ಕೃತಿಕ ವೈಶಿಷ್ಟವೆಂದರೆ ಭೂತಾರಾಧನೆ ಮತ್ತು ನಾಗಾರಾಧನೆ. ತುಳುವರು ವೈದಿಕ ದೇವರುಗಳಿಗಿಂತ ಹೆಚ್ಚಾಗಿ ಭೂತಾರಾಧನೆ ಮತ್ತು ನಾಗಾರಾಧನೆಯಲ್ಲಿ ನಂಬಿಕೆ ಇಡುತ್ತಾರೆ. ಇತ್ತೀಚೆಗೆ ತುಳುನಾಡಿನಲ್ಲಿ (ದ.ಕ., ಉಡುಪಿ ಜಿಲ್ಲೆಯಲ್ಲಿ) ಸ್ಥಾಪಿತ ಹಿತಾಸಕ್ತಿಗಳು ಹಿಂದೂ ದೇವಸ್ಥಾನದ ಹೆಸರಲ್ಲಿ ಮುಸ್ಲಿಮ್ ದ್ವೇಷ ಸಾಧಿಸುವುದು ವಿಪರೀತವಾಗಿದೆ. 300-400 ವರ್ಷಗಳ ಹಿಂದೆ ಸ್ವತಃ ಮುಸ್ಲಿಮರು ಕಟ್ಟಿಸಿದ ಹಿಂದೂ ದೇವಸ್ಥಾನಗಳಲ್ಲೂ ಮುಸ್ಲಿಮರ ವಿರುದ್ಧವೇ ದ್ವೇಷ ಸಾಧಿಸುವವರೂ ಇದ್ದಾರೆ. ಅಷ್ಟೇ ಅಲ್ಲ ಕೆಲವೆಡೆ ಭೂತದೈವಗಳ ಕೋಲ, ನೇಮ, ತಂಬಿಲಗಳಲ್ಲೂ ಮುಸ್ಲಿಮರ ವಿರುದ್ಧ ಪರೋಕ್ಷ ದ್ವೇಷ ತೋರಿಸಲಾಗುತ್ತಿದೆ. ತುಳುನಾಡಿನ ದೈವಗಳು ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯ ಪ್ರತೀಕಗಳಾಗಿವೆ. ಆದರೆ ಈಗೀಗ ತುಳುವ ಭೂತದೈವಗಳಿಗೆ ಯಾವುದೇ ಸಂಬಂಧವಿಲ್ಲದ ಶಿವಾಜಿಯ ಚಿತ್ರದ ಪತಾಕೆ, ಕೇಸರಿ ಬಾವುಟ-ಬಂಟಿಂಗ್‌ಗಳು, ಮೂಲ ಪಾಲಿ ಭಾಷೆಯ ಓಂ ಅಕ್ಷರ, ಒಂಟಿ ರಾಮನ ಚಿತ್ರ ಕೋಲ, ನೇಮಗಳಲ್ಲಿ ಎಲ್ಲೆಡೆ ರಾರಾಜಿಸುತ್ತವೆ. ಮಹಾರಾಷ್ಟ್ರದ ಶಿವಾಜಿ, ಉತ್ತರ ಭಾರತದ ಪುರಾಣದ ಹನುಮಂತ, ಶ್ರೀರಾಮರಿಗೆ ಹಾಗೂ ತುಳುವರ ಭೂತದೈವಗಳಿಗೆ ಎಲ್ಲಿಂದ ಎಲ್ಲಿಯ ಸಂಬಂಧ ಎಂದೇ ಆರ್ಥವಾಗುತ್ತಿಲ್ಲ!

ನಿಜವಾಗಿ ಈಗ ನಾವು ಭೂತ ದೈವ ಎಂದು ಪೂಜಿಸುವ ಪವಿತ್ರ ಶಕ್ತಿಗಳು ಯಾರೆಂದರೆ ಮೂಲತಃ ಈ ತುಳುನಾಡಿನ ಮಣ್ಣಿನಲ್ಲಿ ಮನುಷ್ಯರಾಗಿ ಬದುಕಿ ಸಮಾಜದ ಉದ್ಧಾರದ ಕೆಲಸ ಮಾಡಿದ ಹಾಗೂ ಇಲ್ಲಿಯ ಜೈನ-ಬಂಟ ಅರಸರ ಅಥವಾ ಜಮೀನುದಾರರ ಶೋಷಣೆಯ ವಿರುದ್ಧ ಹೋರಾಡಿ ಮಡಿದ ವೀರ ಮಹಾಪುರುಷರಾಗಿದ್ದರು. ಈ ಮಹಾಪುರುಷ/ವೀರ ಮಹಿಳೆಯರಲ್ಲಿ ಹೆಚ್ಚಿನವರು 700 ವರ್ಷಗಳಿಂದೀಚಿನವರು. ಮುಸ್ಲಿಮರು ನಮ್ಮ ತುಳುನಾಡಿಗೆ 1,200 ವರ್ಷಗಳ ಹಿಂದೆಯೇ ಬಂದು ನೆಲೆಸಿದ್ದರು. ಹಾಗಿದ್ದರೂ ಆ ಮುಸ್ಲಿಮರು ತುಳುವ ಶೂರ ಮಹಾಪುರುಷರಿಗೆ ಯಾವುದೇ ತೊಂದರೆ ಕೊಟ್ಟ ಉದಾಹರಣೆ ನಮ್ಮ ಭೂತಾರಾಧನೆಯ ಇತಿಹಾಸದಲ್ಲಿ ಇಲ್ಲ.

ಈ ಮಹಾಪುರುಷರಿಗೆ ನಿಜವಾಗಿ ತೊಂದರೆ ಕೊಟ್ಟು ಅವರನ್ನು ಮೋಸದಿಂದ ಕೊಂದು ನಂತರ ಆ ಮಹಾಪುರುಷರು ಇಂತಹ ಸ್ಥಳದಲ್ಲಿ 'ಮಾಯವಾದರು' ಎಂದು ಅಜ್ಜಿ ಕಥೆ ಕಟ್ಟಿ ಹಣ ಸಂಗ್ರಹಿಸಿ ಗುಡಿ ಕಟ್ಟಿ ಮೆರೆದು ತುಳುವ ಶೂದ್ರರನ್ನು ಮಾನಸಿಕ ಗುಲಾಮರನ್ನಾಗಿ ಮಾಡಿದವರು ತುಳುವ ಹಿಂದೂ-ಜೈನ ಮೇಲ್ಜಾತಿಯವರೇ ಆಗಿದ್ದರು. ಅತಿ ಅದ್ಭುತ ಗೋಮಟೇಶ್ವರ ಮೂರ್ತಿಯನ್ನು ಕಡೆದು ಕೊಟ್ಟ ಕಲ್ಕುಡ, ಕಲ್ಲುರ್ಟಿಗೆ ಅನ್ಯಾಯ ಮಾಡಿದವರು ಜೈನ ಅರಸರು. ಕೋಟೆದ ಬಬ್ಬು (ಕೋರ್ದಬ್ಬು), ಕೊರಗಜ್ಜ (ಕೊರಗ ತನಿಯ), ಕೋಟಿ ಚೆನ್ನಯ, ಬೊಬ್ಬರ್ಯ (ಬೊಬ್ಬಬ್ಯಾರಿ), ಜಾರಂದಾಯ, ಕೊಡಮಂದಾಯ, ಉಲ್ಲಾಯ, ಜುಮಾದಿ (ತೃತೀಯಾ ಲಿಂಗಿ) ಇವರಿಗೆಲ್ಲಾ ಅನ್ಯಾಯ ಮಾಡಿದವರು ಹಿಂದೂ ಮೇಲ್ಜಾತಿಯವರೇ ವಿನಹ ಮುಸ್ಲಿಮರಲ್ಲ. ಹಾಗಿದ್ದರೂ ಕೋಲ, ನೇಮ, ತಂಬಿಲಗಳಲ್ಲಿ ಆಯೋಜಕರ ಮುಸ್ಲಿಮ್ ದ್ವೇಷ ಇತ್ತೀಚೆಗೆ ಎದ್ದು ಕಾಣುತ್ತದೆ. ಕೋಲ, ನೇಮ ಆಯೋಜಿಸುವ ಗುತ್ತಿನವರು ಮುಸ್ಲಿಮ್ ವ್ಯಾಪಾರಿಗಳಿಗೆ ಅಂಗಡಿ ಹಾಕಲು ಬಿಡುವುದಿಲ್ಲ. ವಿಚಿತ್ರವೆಂದರೆ ಈ ಮಹಾಪುರುಷರು ಬದುಕಿದ್ದಾಗ ಅವರಿಗೆ ಘೋರ ಅನ್ಯಾಯ ಮಾಡಿ ಕೊನೆಗೆ ಅವರಿಗೆ ಮೋಸದಿಂದ ಮರಣ ತಂದ ಮೇಲ್ಜಾತಿಯವರೇ ಈಗ ಹೆಚ್ಚಿನ ಭೂತ ದೈವಸ್ಥಾನಗಳ ಮೊಕ್ತೇಸರರು! ಬುದ್ಧಿವಂತರ ನಾಡಿನ ಈ ವಿಪರ್ಯಾಸಕ್ಕೆ ಏನೆನ್ನಬೇಕು?

ಕೊನೆಗೆ ತುಳುವರ ಒಂದು ವಿಶೇಷ ಎಲ್ಲರೂ ಗಮನಿಸಬೇಕು, ಅದೇನೆಂದರೆ ಹೊರನಾಡಿನಿಂದ ಬಂದ ಕೊಂಕಣಿ ಬ್ರಾಹ್ಮಣರು ಭೂತ ದೈವಗಳನ್ನು ನಂಬುತ್ತಾರೆ ಮತ್ತು ಗೌರವಿಸುತ್ತಾರೆ. ಹೊರಗಿನ ಕ್ರೈಸ್ತರೂ ಭೂತದೈವಗಳ ಕಾರಣಿಕವನ್ನು ನಂಬುತ್ತಾರೆ. ಆದರೆ ತುಳುವ ಸ್ಮಾರ್ತ ಮತ್ತು ಮಧ್ವ ಬ್ರಾಹ್ಮಣರು ಅಪ್ಪಿತಪ್ಪಿಯೂ ಭೂತ ದೈವಗಳಿಗೆ ಕೈಮುಗಿಯುವುದಿಲ್ಲ ಹಾಗೂ ಗಂಧ ಪ್ರಸಾದ ಸ್ವೀಕರಿಸಲು ಬಹಿರಂಗವಾಗಿ ನಿರಾಕರಿಸುತ್ತಾರೆ. ಆದರೂ ಅವರು ಹಿಂದೂ ಸಂಸ್ಕೃತಿಯ ರಕ್ಷಕರಂತೆ.

Writer - ಅಭಿಷೇಕ್ ಪಡಿವಾಲ್, ಸುಳ್ಯ

contributor

Editor - ಅಭಿಷೇಕ್ ಪಡಿವಾಲ್, ಸುಳ್ಯ

contributor

Similar News