ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮ ಜರುಗಿಸಿ

Update: 2022-05-13 18:08 GMT

ಮಾನ್ಯರೇ,

ತೀರ್ಥಹಳ್ಳಿಯಲ್ಲಿ ಕಳೆದ ಸೋಮವಾರ ರಾತ್ರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ದೂರು ಕೊಡಲು ಆರಕ್ಷಕ ಠಾಣೆಗೆ ಹೋದ ದಂಪತಿಯಿಂದ ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಿಕೊಳ್ಳದೆ, ಕೇಸನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ.

ಸಂತ್ರಸ್ತೆಯು ಪರಿಶಿಷ್ಟ ಜಾತಿಗೆ ಸೇರಿದವರೆಂಬ ಕಾರಣಕ್ಕೆ ದಂಪತಿಯಿಂದ ಹೇಳಿಕೆ ಪಡೆದಿದ್ದ ಪೊಲೀಸರು ಎರಡು ದಿನಗಳಾದರೂ ಮೊಕದ್ದಮೆ ದಾಖಲಿಸಿರಲಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದರೆ ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಕೇಸ್ ದಾಖಲಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಕಾನೂನಿನ ಮುಂದೆ ಯಾವುದೇ ಜಾತಿ, ಧರ್ಮ, ಬೇಧ-ಭಾವಗಳಿರದೆ ಎಲ್ಲರೂ ಸಮಾನರೆಂಬ ಸಂವಿಧಾನದ ಮಾತನ್ನೇ ತಿರುಚಿಹಾಕಿರುವ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ. ದೂರು ಕೊಡಲು ಬಂದ ದಂಪತಿಯಿಂದ ಹೇಳಿಕೆ ಪಡೆದು ಆರೋಪಿಗಳನ್ನು ಬಂಧಿಸಬೇಕಾಗಿದ್ದ ಪೊಲೀಸರು, ಆರೋಪಿಗಳನ್ನು ಪಾರು ಮಾಡಲು ಯತ್ನಿಸಿರುವುದು ಪೊಲೀಸ್ ಎಂಬ ಪದಕ್ಕೆ ಕಳಂಕ ತಂದೊಡ್ಡಿದೆ. ಇಂತಹ ಹೀನಾಯ ಕೃತ್ಯಕ್ಕೆ ಇಳಿದಿರುವಂತಹ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಸಂಬಂಧ ಪಟ್ಟಂತಹ ಮೇಲಾಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮತ್ತೆಂದೂ ಇಂತಹ ತಪ್ಪುಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ.
 

Writer - -ಮನೋಜ್ ರಾಜ್, ಶಿವಮೊಗ್ಗ

contributor

Editor - -ಮನೋಜ್ ರಾಜ್, ಶಿವಮೊಗ್ಗ

contributor

Similar News