ದೇವಾಲಯ ಖರೀದಿಸಿ ಮಸೀದಿಯಾಗಿ ಪರಿವರ್ತಿಸಿದರೆ ಆಕ್ಷೇಪವಿಲ್ಲ : ಪೇಜಾವರ ಶ್ರೀ

Update: 2022-05-16 07:46 GMT

ಉಡುಪಿ : ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆ ಮಾಡುವ ಕುರಿತು ಈಗಾಗಲೇ ಮಾರ್ಗದರ್ಶನ ನೀಡಿದೆ. ಆ ನಿಯಮವನ್ನು ಹಿಂದೂ ಸಮಾಜ ಪಾಲಿಸಬೇಕು. ವಿಶೇಷ ದಿನಗಳು, ವಿಶೇಷ ಆಚರಣೆ ಸಂದರ್ಭ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡಬೇಕು ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಯಾವುದೋ ಕಾರಣಕ್ಕೆ ಯಾವುದೋ ಕಾಲದಲ್ಲಿ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿವೆ. ಯಾವುದೋ ದೇವಾಲಯವನ್ನು ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ. ಯಾವುದೇ ಪೂಜಾ ಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು ಖರೀದಿಸಿ ಮಾರ್ಪಾಟು ಮಾಡಿದ್ದರೆ ಸಮಸ್ಯೆ ಇಲ್ಲ. ಆದರೆ ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ ಎಂದರು.

ಈಗ ಆಗುತ್ತಿರುವ ಇಂತಹ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ. ಈಗ ಇದೊಂದು ಕಾಲಘಟ್ಟ. ನ್ಯಾಯಾಲಯದ ತೀರ್ಪು ಎಲ್ಲರೂ ಪರಿಪಾಲಿಸಬೇಕು. ಹಿಂದೆ ಆಗಿಹೋದ ಬಗ್ಗೆ ಕೋರ್ಟ್ ತೀರ್ಮಾನ ಕೊಟ್ಟದ್ದಾದರೆ ಯಾರೂ ಇದನ್ನು ಹಿನ್ನಡೆ ಎಂದು ಭಾವಿಸಬಾರದು. ಹಿಂದೂಗಳ ಪೂಜಾ ಮಂದಿರಗಳನ್ನು ಹಿಂದುಗಳಿಗೆ ಬಿಟ್ಟು ಕೊಡಬೇಕು. ಮುಸಲ್ಮಾನರ ದರ್ಗಾ ಆಗಿದ್ದರೆ ಮುಸಲ್ಮಾನ ರಿಗೆ ಬಿಟ್ಟು ಕೊಡಬೇಕು ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್ ಮಾಡುವ ಮಾರ್ಗದರ್ಶನದಂತೆ ನಾವು ನಡೆಯು ವುದು ಸೂಕ್ತ. ತಪ್ಪು ಆಗಿದ್ದರೆ ಅದು ತಪ್ಪೇ. ಯಾರು ಯಾವುದನ್ನು ಸಮರ್ಥನೆ ಮಾಡುವುದು ಸೂಕ್ತ ಅಲ್ಲ. ಸಂಘರ್ಷಕ್ಕೆ ಇಳಿಯದೆ ಸೌಹಾರ್ದದಿಂದ ಬಿಟ್ಟು ಕೊಡಬೇಕು. ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News