ಒಂದೇ ಐಪಿಎಲ್ ಫ್ರಾಂಚೈಸಿ ಪರ 7,000 ರನ್: ವಿರಾಟ್ ಕೊಹ್ಲಿ ವಿಶೇಷ ದಾಖಲೆ

Update: 2022-05-20 13:53 GMT

 ಮುಂಬೈ, ಮೇ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಒಂದೇ ಐಪಿಎಲ್ ಫ್ರಾಂಚೈಸಿ ಪರ 7,000 ರನ್ ಗಳಿಸಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ 57 ರನ್ ತಲುಪಿದಾಗ ಕೊಹ್ಲಿ ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಕೊಹ್ಲಿ 73 ರನ್ (54 ಎಸೆತ)ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಗುಜರಾತ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ್ದ ಆರ್‌ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಒಂದೇ ಫ್ರಾಂಚೈಸಿ ಪರ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. 2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ಈ ತಂಡಕ್ಕಾಗಿ ಅವರು ಗಳಿಸಿರುವ 7 ಸಾವಿರಕ್ಕೂ ಹೆಚ್ಚು ರನ್ ಪೈಕಿ 6,592 ರನ್ ಐಪಿಎಲ್ ಟೂರ್ನಿಗಳಲ್ಲೇ ಬಂದಿದೆ. ಬಾಕಿ ರನ್ ಚಾಂಪಿಯನ್ಸ್ ಲೀಗ್ ವೇಳೆ ಕಲೆ ಹಾಕಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ (6,592 ರನ್)ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿಯ ಬಳಿಕ ಶಿಖರ್ ಧವನ್(6,205 ರನ್), ರೋಹಿತ್ ಶರ್ಮಾ(5,877 ರನ್), ಡೇವಿಡ್ ವಾರ್ನರ್(5,876 ರನ್), ಸುರೇಶ್ ರೈನಾ(5,528 ರನ್) ಹಾಗೂ ಎಬಿಡಿ ವಿಲಿಯರ್ಸ್(5,162 ರನ್)ಅವರಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News