ಮದುವೆ ಸಮಾರಂಭದಲ್ಲಿ ಕಳಚಿದ ವರನ 'ವಿಗ್‌': ಬೋಳು ತಲೆಯ ಕಾರಣಕ್ಕೆ ವಿವಾಹವನ್ನೇ ರದ್ದು ಪಡಿಸಿದ ವಧು !

Update: 2022-05-23 17:20 GMT

ಲಖ್ನೋ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ವರ ಬೋಳು ತಲೆಯೆಂದು ಮದುವೆ ಕಾರ್ಯಕ್ರಮವೇ ಅರ್ಧದಲ್ಲಿ ರದ್ದಾದ ಪ್ರಕರಣ ನಡೆದಿದೆ. ಬೋಳು ತಲೆಯ ವರನನ್ನು ವರಿಸಲು ವಧು ತಯಾರಾಗದ ಕಾರಣ ಮದುವೆ ಅರ್ಧಕ್ಕೆ ನಿಂತಿದೆ ಎಂದು news18 ವರದಿ ಮಾಡಿದೆ. 

 ಮದುವೆ ಸಂಪ್ರದಾಯದ ಸುಮಾರು ಅರ್ಧದಷ್ಟು ವಿಧಿ ವಿಧಾನಗಳು ಪೂರ್ತಿಗೊಂಡಿತ್ತು. ವರ ಏಳು ಸುತ್ತು ಬರುವಷ್ಟರಲ್ಲಿ ತಲೆಸುತ್ತು ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದು, ಅಷ್ಟರಲ್ಲಿ ವಧುವಿನ ಸಹೋದರ ವರನ ಮುಖ ಮತ್ತು ತಲೆಯ ಮೇಲೆ ನೀರು ಚಿಮುಕಿಸಿ ಎಚ್ಚರಿಸಲು ನೋಡಿದ್ದಾರೆ, ಈ ವೇಳ ವರನ ತಲೆಯಿಂದ ಕೂದಲಿನ ವಿಗ್ ಕಳಚಿದೆ. ಇದನ್ನು ಕಂಡು ಅಲ್ಲಿದ್ದವರು ನಕ್ಕಿದ್ದು, ವಧುವಿನ ಕಡೆಯವರು ವರನ ಕುಟುಂಬ ನಮ್ಮನ್ನು ವಂಚಿಸಿದೆ ಎಂದು ಆರೋಪಿಸಿದೆ. ಇದಾದ ನಂತರ ವಧು ಮದುವೆಯಾಗಲು ನಿರಾಕರಿಸಿದ್ದಾರೆ.

ಈ ನಡುವೆ ಎರಡೂ ಕಡೆಯವರ ನಡುವೆ ವಾಗ್ವಾದಗಳೂ ಕೂಡ ನಡೆದಿದೆ. ಆದರೆ, ಜನರು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿದ್ದು, ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಲಾಯಿತು.  ಕೊನೆಗೆ ಪೊಲೀಸರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ಎರಡೂ ಕುಟುಂಬ ಹೋಗಿದ್ದು, ಅಲ್ಲೂ ವಧುವನ್ನು ಮನವೊಲಿಸಲು ಪ್ರಯತ್ನಿಸಲಾಯಿತು ಎಂದು ವರದಯಾಗಿದೆ. ಆದರೆ, ವಧು ಯಾವ ಕಾರಣಕ್ಕೂ ಮದುವೆಗೆ ಒಪ್ಪದ ಕಾರಣ, ಕೊನೆಗೆ ಮದುವೆ ಬಿದ್ದಿದೆ. 

 ವರ ಬೋಳು ತಲೆಯವನು ಎಂದು ಮೊದಲೇ ತಿಳಿಸದೆ ಇದ್ದಿದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಎಂದು ವಧುವಿನ ಚಿಕ್ಕಪ್ಪ ಹೇಳಿದ್ದಾರೆ. ಮೊದಲೇ ತಿಳಿಸಿದ್ದಿದ್ದರೆ, ಮಗಳ ಮನವೊಲಿಸಿ, ಆಕೆಯನ್ನು ಸಿದ್ದಗೊಳಿಸುತ್ತಿದ್ದೆವು. ಆದರೆ, ಏಕಾಏಕಿ ವಿಗ್‌ ಕಳಚಿರುವುದು ಆಕೆಯ ಆಘಾತಕ್ಕೆ ಕಾರಣವಾಗಿದೆ, ಅವಳಿಗೆ ಮೋಸ ಹೋದ ಅನುಭವ ಆಗಿದೆ ಎಂದು ಅವರು ಹೇಳಿರುವುದಾಗಿ new18 ವರದಿ ಮಾಡಿದೆ. 

ಇನ್ನು, ಮದುವೆಗೆ ಖರ್ಚಾದ 5 ಲಕ್ಷದ 60 ಸಾವಿರ ರುಪಾಯಿಯನ್ನೂ ವಧುವಿನ ಕುಟುಂಬ ವರನಿಂದ ವಸೂಲಿ ಮಾಡಿದೆ. ಪೊಲೀಸರ ಸಮ್ಮುಖದಲ್ಲಿ ಈ ಬಗ್ಗೆ ಲಿಖಿತ ಒಪ್ಪಂದವಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News