ಮಕ್ಕಳ ಭವಿಷ್ಯಕ್ಕೆ ಮೌಲಿಕವಾದ ಸುಗಮ ಹಾದಿ ಹುಡುಕುವತ್ತ...

Update: 2022-05-24 18:16 GMT

ಮಾನ್ಯರೇ,

ಪಠ್ಯ ಪುಸ್ತಕದಲ್ಲಿ ಸಂಘ ಪರಿವಾರದ ಅಜೆಂಡ ನೆಲೆಯೂರಿಸುತ್ತಿರುವ ಹಿನ್ನೆಲೆಯಲ್ಲಿ, ಕೇವಲ ಶೇ. 3 ಬ್ರಾಹ್ಮಣ ಸಮುದಾಯದ ವಿಜೃಂಭಣೆ, ಶೇ. 97 ಹಿಂದೂ ಶೂದ್ರ, ಅತಿ ಶೂದ್ರ, ವಿವಿಧ ಧರ್ಮೀಯ ಅಲ್ಪಸಂಖ್ಯಾತರ ಸಮುದಾಯಗಳ ಅವಗಣನೆಯಿಂದಾಗಿ ಸದರಿ ಪಠ್ಯ ಓದುವ ಮಕ್ಕಳ ಮನಸ್ಸಿನ ಮೇಲೆ ಜಾತಿ ತಾರತಮ್ಯಗಳು, ಧರ್ಮ-ಧರ್ಮಗಳ ನಡುವೆ ಮತೀಯ ದ್ವೇಷ ಬೀರುವ ಪ್ರಭಾವ, ಬ್ರಾಹ್ಮಣ್ಯೀಕರಣವನ್ನೇ ರಾಷ್ಟ್ರೀಯತೆ, ಭಾರತೀಯತೆ ಎಂದೇ ನಂಬುವ ಅಪಾಯ, ಪರೋಕ್ಷವಾಗಿ ಅಸ್ಪೃಶ್ಯತೆಯ ಪ್ರತಿಪಾದನೆ, ಜನಾಂಗೀಯ ಮತ್ತು ಮತೀಯ ದ್ವೇಷ, ಫ್ಯಾಶಿಸಂ ಕಡೆಗೆ ಮಕ್ಕಳು ಒಲವು ತೋರುವಂತಹ ತೀರಾ ಅಪಾಯಗಳಿವೆ. ಇದರೊಂದಿಗೆ ರಾಷ್ಟ್ರಕವಿ ಕುವೆಂಪು, ಭಗತ್ ಸಿಂಗ್, ಎ.ಎನ್. ಮೂರ್ತಿರಾವ್, ಪಿ.ಲಂಕೇಶ್, ದೇವನೂರ ಮಹಾದೇವ ಮುಂತಾದ ರಾಷ್ಟ್ರದ ಮತ್ತು ನಾಡಿನ ಮೇರು ವ್ಯಕ್ತಿತ್ವಗಳನ್ನು ಅವಮಾನಿಸುವಂತಹ ಅನಾಹುತಗಳಿಂದ ಮಕ್ಕಳನ್ನು ಕಾಪಾಡಬೇಕಾದುದು ಪ್ರಜ್ಞಾವಂತರಾದ ನಮ್ಮೆಲ್ಲರ ಕರ್ತವ್ಯ?
ಈ ದಿಸೆಯಲ್ಲಿ ಅನೇಕ ಮಂದಿ ಪ್ರಜ್ಞಾವಂತರು ದಿನನಿತ್ಯ ಪ್ರತಿಕ್ರಿಯಿಸುತ್ತಿದ್ದಾರೆ, ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಮಾತ್ರ ಈ ಪ್ರತಿರೋಧ ಪ್ರಕಟವಾಗುತ್ತಿವೆ. ಆದರೆ ಬಹುತೇಕ ಬ್ರಾಹ್ಮಣ ದೃಶ್ಯ ಮಾಧ್ಯಮಗಳು ಸಂಘಪರಿವಾರದ ಬ್ರಾಹ್ಮಣ್ಯದ ಹುನ್ನಾರಗಳನ್ನು ಸಮರ್ಥಿಸುತ್ತಾ ಶೂದ್ರಾದಿಶೂದ್ರರನ್ನು ದಿಕ್ಕುತಪ್ಪಿಸುತ್ತಿವೆ.
ಇಡೀ ರಾಜ್ಯಕ್ಕೆ ರಾಜ್ಯವೇ ಕಳವಳ ಪಡಬೇಕಾದ ಕಾಲಘಟ್ಟವಿದು, ಸರಕಾರ ತನ್ನ ಸೂಕ್ಷ್ಮ್ಮತೆಯನ್ನು ಕಳೆದುಕೊಂಡಿರುವುದರಿಂದ ಈ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ಸುಮ್ಮನೆ ಕೂರಬೇಕಾದ ಕಾಲವಲ್ಲ, ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ ಇಲ್ಲಿ ಅಡಗಿದೆ, ಆದ್ದರಿಂದ ಈ ಮಕ್ಕಳ ತಂದೆತಾಯಿಗಳು, ಬಂಧುಬಳಗದವರು, ರೈತರು, ಕಾರ್ಮಿಕರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ವಕೀಲರು, ರಾಜಕಾರಣಿಗಳು, ವೈದ್ಯರೇ ಮುಂತಾದ ವೃತ್ತಿಪರರು, ನಾಗರಿಕರೆಲ್ಲ ಸೇರಿ ಎಡ, ಬಲ, ಮಧ್ಯಮ ಪಂಥಗಳೆಂದು ಎಣಿಸದೆ ದೊಡ್ಡ ಪ್ರಮಾಣದಲ್ಲಿ ನಮ್ಮ ಪ್ರತಿರೋಧವನ್ನು ದಾಖಲಿಸಿ ಈಗಿರುವ ಜೀವವಿರೋಧಿ ಪಠ್ಯವನ್ನು ಕೈಬಿಡುವಂತೆ ಮಾಡಿ ನಮ್ಮ ಮಕ್ಕಳ ಭವಿಷ್ಯಕ್ಕೆ ಮೌಲಿಕವಾದ ಸುಗಮ ಹಾದಿ ಹಾಕಬೇಕಿದೆ.. ಈ ದಿಸೆಯಲ್ಲಿ ನಾವು ಹೇಗೆ ಸಂಘಟಿತವಾಗಬಹುದು? ಎಂಬುದನ್ನು ಚಿಂತಿಸಿ ನಿಮ್ಮ ಅಭಿಪ್ರಾಯ ನೀಡಬೇಕೆಂದು ಕೋರುತ್ತೇವೆ.

ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಕಲೆಹಾಕಿ, ಯಾವ ದೃಷ್ಟಿಯಿಂದಲೂ ಒಪ್ಪಿತವಲ್ಲದ ಈ ಪರಿಷ್ಕೃತ ಪಠ್ಯಕ್ರಮವನ್ನು ವಿರೋಧಿಸಿ, ಸರಕಾರದ ಮುಂದೆ ಇಡೋಣ. ಒಂದು ತರ್ಕಬದ್ಧವಾದ ಸಂವಾದವನ್ನು ಸರಕಾರದೊಂದಿಗೆ ಆರಂಭಿಸುವಲ್ಲಿ ಹೆಜ್ಜೆ ಇಡೋಣ. ಯೋಚಿಸೋಣ.

- ಸಿ.ಎಸ್. ದ್ವಾರಕಾನಾಥ್, ಕೇಸರಿ ಹರವೂ, ಡಿ.ಎಸ್.ಚೌಗಲೆ, ದಿಲಾವರ್ ರಾಮದುರ್ಗ, ಬೇಲೂರು ರಘುನಂದನ್, ಅನಿಲ್ ಹುಲಿಯಾ, ತಾಯಿ ಲೋಕೇಶ್, ವಿಷ್ಣುಕುಮಾರ್ ಎಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News