ಕ್ಯಾಂಪಸ್‌ ಆವರಣದಲ್ಲಿ ನಮಾಝ್‌ ಮಾಡಿದ ಪ್ರಾಧ್ಯಾಪಕನನ್ನು ರಜೆಯ ಮೇಲೆ ಕಳುಹಿಸಿದ ಅಧಿಕಾರಿಗಳು

Update: 2022-06-01 07:57 GMT
Photo: ANI

ಅಲಿಘರ್:‌ ಕಾಲೇಜ್‌ ಕ್ಯಾಂಪಸ್‌ ನ ಆವರಣದೊಳಗೆ ತೆರೆದ ಜಾಗದಲ್ಲಿ ನಮಾಝ್‌ ಮಾಡಿದ್ದಕ್ಕಾಗಿ ಇಲ್ಲಿನ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೋರ್ವರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು Indianexpress.com ವರದಿ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊ ವೈರಲ್‌ ಆದ ಬಳಿಕ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ವೀಡಿಯೋದಲ್ಲಿ, ಅಲಿಘರ್‌ ನ ಶ್ರೀವರ್ಷಿ ಕಾಲೇಜ್ ನ ಕ್ಯಾಂಪಸ್‌ ನೊಳಗಿನ ಉದ್ಯಾನವನದಲ್ಲಿ ಅಲ್ಲಿನ ಪ್ರಾಧ್ಯಾಪಕರಾದ ಪ್ರೊಫೆಸರ್‌ ಎಸ್‌.ಕೆ ಖಾಲಿದ್‌ ಅವರು ನಮಾಝ್‌ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ವೀಡಿಯೋವನ್ನು ಬಲಪಂಥೀಯ ಸಂಘಟನೆಗಳು ಕಾಲೇಜಿನ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಇದೀಗ ಪ್ರಕರಣದ ಕುರಿತು ತನಿಖಾ ಸಮಿತಿಯನ್ನೂ ರಚಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. 

ವೀಡಿಯೊ ವೈರಲ್ ಆಗುತ್ತಿದ್ದಂತೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಯುವ ಮೋರ್ಚಾ ಸೇರಿದಂತೆ ಬಲಪಂಥೀಯ ಸಂಘಟನೆಗಳು ಪ್ರಾಧ್ಯಾಪಕರು ಮತ್ತು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿದರು. 

"ಈ ಘಟನೆಯ ಸಂದರ್ಭದಲ್ಲಿ ನಾನು ರಜೆಯಲ್ಲಿದ್ದೆ. ನಾನು ಹಿಂತಿರುಗಿದ ಬಳಿಕ ಈ ಕುರಿತು ವಿಚಾರಣೆ ಮಾಡಿದೆ. ಆಗ ಅವರು, ನಾನು ತುಂಬಾ ತುರ್ತಿನಲ್ಲಿದ್ದ ಕಾರಣ ಉದ್ಯಾನವನದಲ್ಲಿ ನಮಾಝ್‌ ಮಾಡಿದೆ ಎಂದು ಹೇಳಿದ್ದಾರೆ. ಪ್ರಕರಣದ ಕುರಿತ ಸತ್ಯಾಸತ್ಯತೆಗಳನ್ನು ಪರಿಶೀಲನೆ ನಡೆಸಲು ತನಿಖಾ ಸಮಿತಿ ಸ್ಥಾಪಿಸಲಾಗಿದೆ. ಸಮಿತಿಯ ನಿರ್ಧಾರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಚಾರ್ಯ ಎ.ಕೆ ಗುಪ್ತ ಹೇಳಿದ್ದಾರೆ. 

ರವಿವಾರ ರಚಿಸಲಾದ ಸಮಿತಿಯು ಈ ವಾರ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ತನಿಖಾ ಸಮಿತಿಯ ಸಭೆಯು ʼಕ್ಷಮೆಯಾಚಿಸುವ ಅಗತ್ಯವಿದೆಯೇʼ ಎಂದು ನಿರ್ಧರಿಸುತ್ತದೆ" ಎಂದು ಗುಪ್ತಾ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News