ದ್ವೇಷ ಭಾಷಣದ ಕುರಿತು ಆಕ್ರೋಶ: ಸಂಸದ ತೇಜಸ್ವಿ ಸೂರ್ಯ ಭಾಗವಹಿಸಬೇಕಿದ್ದ ಸಿಡ್ನಿ ಕಾರ್ಯಕ್ರಮ ರದ್ದು

Update: 2022-06-02 09:47 GMT

ಹೊಸದಿಲ್ಲಿ: ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮಾಡಿರುವ ವೀಡಿಯೊ ಸಾಮಾಜಿಕ ತಾಣದಾದ್ಯಂತ ಆಕ್ರೋಶಕ್ಕೀಡಾಗಿದೆ. ಜೊತೆಗೆ, ಅವರ ಭಾಷಣವನ್ನು ಹಲವಾರು ಮಂದಿ ತೀವ್ರವಾಗಿ ವಿರೋಧಿಸಿದ ಬಳಿಕ ಸಂಸದ ಭಾಗವಹಿಸಬೇಕಾಗಿದ್ದ ಕಾರ್ಯಕ್ರಮವೊಂದನ್ನೂ ಆಯೋಜಕರು ರದ್ದುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಆಸ್ಟ್ರೇಲಿಯಾದಲ್ಲಿರುವ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ಒಳಾಂಗಣ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ಕುರಿತು ದ್ವೇಷದ ಮಾತುಗಳನ್ನಾಡುವ ವೀಡಿಯೊ ಟ್ವಿಟರ್‌ ನಲ್ಲಿ ವೈರಲ್‌ ಆಗಿತ್ತು.

ಇದೀಗ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾಗವಹಿಸಬೇಕಿದ್ದ  ಕಾರ್ಯಕ್ರಮ ರದ್ದುಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿನ್ಬೋರ್ನ್  ಯುನಿವರ್ಸಿಟಿ, ಈ ಕಾರ್ಯಕ್ರಮವನ್ನು ತಾನು ಆಯೋಜಿಸಿರಲಿಲ್ಲ ಎಂದು ಹೇಳಿದೆ. ಈ ಕಾರ್ಯಕ್ರಮವನ್ನು ಖಾಸಗಿ ಸಂಸ್ಥೆಯಾಗಿರುವ ಎಜುಕೇಶನ್ ಸೆಂಟರ್ ಆಫ್ ಆಸ್ಟ್ರೇಲಿಯಾ ಆಯೋಜಿಸಿದೆ ಎಂದು ಯುನಿವರ್ಸಿಟಿ ಹೇಳಿದೆ.

ಈ ಕಾರ್ಯಕ್ರಮಕ್ಕೆ ಸ್ವಿನ್ಬೋರ್ನ್ ವಿವಿಯಿಂದ ಬೆಂಬಲವೂ ಇರಲಿಲ್ಲ. ಆದರೆ ವಿವಿ ಕಟ್ಟಡವಿರುವಲ್ಲಿ ಆ ಕಾರ್ಯಕ್ರಮ ಆಯೋಜಿಸಲಾಗಿತ್ತು ಹಾಗೂ ಅದು ರದ್ದುಗೊಂಡಿರುವ ಬಗ್ಗೆ ವಿವಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಆಸ್ಟ್ರೇಲಿಯಾಗೆ ತೇಜಸ್ವಿ ಸೂರ್ಯ ಭೇಟಿ ವಿರೋಧಿಸುತ್ತಿದ್ದ ಹಲವರಲ್ಲಿ ಒಬ್ಬರಾಗಿರುವ ಭಾರತೀಯ ಮೂಲದ ಆಸ್ಟ್ರೇಲಿಯನ್ ನಾಗರಿಕ, ತಾವು ಸೂರ್ಯ ಭೇಟಿ ವಿರೋಧಿಸಿ ಹಲವು ಪ್ರಾಧಿಕಾರಗಳಿಗೆ  ಬರೆದಿರುವುದಾಗಿ ತಿಳಿಸಿದ್ದಾರಲ್ಲದೆ ದ್ವೇಷ ಭಾಷಣ ನೀಡುವ ಸೂರ್ಯ ಅವರಂತಹ ರಾಜಕಾರಣಿಗಳಿಗೆ ಆಸ್ಟ್ರೇಲಿಯಾ ಪ್ರವೇಶ ನೀಡಬಾರದೆಂದು ಮನವಿ ಮಾಡಿದ್ದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News