ಅಸ್ಸಾಂ ಸಿಎಂ ಪತ್ನಿಯ ಸಂಸ್ಥೆಗೆ ಪಿಪಿಇ ಕಿಟ್ ಪೂರೈಕೆ ಆರ್ಡರ್: ಸಿಬಿಐ, ಇಡಿ ತನಿಖೆಗೆ ವಿಪಕ್ಷಗಳ ಪಟ್ಟು

Update: 2022-06-03 11:45 GMT
ಪ್ರತಿಭಟನೆ ನಡೆಸುತ್ತಿರುವ ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಕಮಿಟಿ

ಗುವಹಾಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಈ ಹಿಂದೆ ಆರೋಗ್ಯ ಸಚಿವರಾಗಿರುವಾಗ ಅವರ ಪತ್ನಿ ರಿನಿಕಿ ಭುಯನ್ ಶರ್ಮ ಅವರ ಒಡೆತನದ  ಸಂಸ್ಥೆಗೆ  ಪಿಪಿಇ ಕಿಟ್‍ಗಳಿಗಾಗಿ ತುರ್ತು ಆರ್ಡರ್ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೆಬ್ಬಿಸಿದ್ದು ಈ ಅಕ್ರಮದ ಕುರಿತಂತೆ ತನಿಖೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.

ಗುರುವಾರ ಪಿಪಿಇ ಕಿಟ್‍ಗಳನ್ನು ಧರಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರಧಾನಿಯ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ ಹಾಗೂ ಸರ್ಮ ಮತ್ತವರ ಕುಟುಂಬದ ಅವ್ಯವಹಾರ ಕುರಿತಂತೆ ಸಿಬಿಐ ಅಥವಾ ಇಡಿ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

ದಿ ವೈರ್ ಮತ್ತು ಕ್ರಾಸ್ ಕರೆಂಟ್ ಮಾಧ್ಯಮ ಸಂಸ್ಥೆಗಳು ಈ ಅವ್ಯವಹಾರ ಕುರಿತು ವರದಿ ಪ್ರಕಟಿಸಿದ್ದವು. ಸರ್ಮ ಅವರ ಪತ್ನಿಯ ಒಡೆತನದ ಜೆಸಿಬಿ ಎಂಟರ್ ಪ್ರೈಸಸ್‍ಗೆ ಪಿಪಿಇ ಕಿಟ್ ಪೂರೈಕೆ ಸಂಬಂಧಿ ಆರ್ಡರ್ ನೀಡಿದಾಗ ಮಾರುಕಟ್ಟೆ ದರಗಳಿಗಿಂತ ಶೇ 65ರಷ್ಟು ಹೆಚ್ಚು ದರಗಳನ್ನು ನಿಗದಿಪಡಿಸಲಾಗಿತ್ತು ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಆರೋಪಿಸಿದ್ದಾರೆ.

ತನಿಖೆಗೆ ಆದೇಶಿಸುವ ತನಕ ಕಾಂಗ್ರೆಸ್ ಪಕ್ಷ ಪಿಪಿಇ ಕಿಟ್ ಧರಿಸಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಆದರೆ ಈ ಅರೋಪ ಕುರಿತಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸರ್ಮ ತಮ್ಮ ಪತ್ನಿಯ ಸಂಸ್ಥೆಯಿಂದ ಪಿಪಿಇ ಕಿಟ್ ಸರಬರಾಜು ಒಂದು ದೇಣಿಗೆಯಾಗಿತ್ತು ಎಂದಿದ್ದಾರೆ. ರಾಜ್ಯದ ಆಸ್ತತ್ರೆಗಳಲ್ಲಿ ಒಂದೇ ಒಂದು ಪಿಪಿಇ ಕಿಟ್ ಇರದೇ ಇದ್ದಾಗ ಈ ಪಿಪಿಇ ಕಿಟ್‍ಗಳನ್ನು ದೇಣಿಗೆ ನೀಡಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News