ದೇಶದಲ್ಲಿ ಒಂದೇ ವಾರದಲ್ಲಿ ಕೋವಿಡ್ ಸೋಂಕು 50 ಸಾವಿರಕ್ಕೆ ಹೆಚ್ಚಳ

Update: 2022-06-13 02:55 GMT
ಫೈಲ್‌ ಫೋಟೊ 

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಮೂರನೇ ಅಲೆ ಜನವರಿಯಲ್ಲಿ ಅಬ್ಬರಿಸಿದ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿವೆ.

ಕಳೆದ ವಾರ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 23 ಸಾವಿರ ಆಗಿದ್ದರೆ, ಈ ವಾರ 49 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ ಪ್ರಕರಣಗಳ ಹೆಚ್ಚಳ ಶೇಕಡ 90ಕ್ಕೂ ಅಧಿಕವಾಗಿದೆ. ಆದಾಗ್ಯೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ.

ಹಿಂದಿನ ವಾರ ದೇಶದಲ್ಲಿ 25596 ಪ್ರಕರಣಗಳು ವರದಿಯಾಗಿದ್ದರೆ, ಜೂನ್-6 ರಿಂದ 12ರ ಅವಧಿಯಲ್ಲಿ 49 ಸಾವಿರ ಪ್ರಕರಣಗಳು ವರದಿಯಾಗಿವೆ. ಇದು ಫೆಬ್ರವರಿ 21-27ರ ಅವಧಿಯಲ್ಲಿ ದಾಖಲಾದ 86 ಸಾವಿರ ಪ್ರಕರಣಗಳ ಬಳಿಕ ಆಗಿರುವ ಗರಿಷ್ಠ ಏರಿಕೆ ಎನಿಸಿದೆ. ಒಂದು ವಾರದ ಅವಧಿಯಲ್ಲಿ 23 ಸಾವಿರಕ್ಕೂ ಅಧಿಕ ಪ್ರಕರಣಗಳು ಹೆಚ್ಚಿರುವುದು ಜನವರಿ 17-23ರ ಬಳಿಕ ಇದೇ ಮೊದಲು.

ಮಹಾರಾಷ್ಟ್ರದಲ್ಲಿ ಒಂದು ವಾರದ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 140ರಷ್ಟು ಏರಿಕೆಯಾಗಿ, 17380ನ್ನು  ತಲುಪಿದೆ. ಕಳೆದ ವಾರ ರಾಜ್ಯದಲ್ಲಿ 7253 ಪ್ರಕರಣಗಳು ವರದಿಯಾಗಿದ್ದವು. ಕೇರಳದಲ್ಲಿ ಕೂಡಾ ಒಂದು ವಾರದಲ್ಲಿ ಶೇಕಡ 70ರಷ್ಟು ಪ್ರಕರಣಗಳು ಏರಿಕೆಯಾಗಿದ್ದು, ವಾರಾಂತ್ಯಕ್ಕೆ ಸುಮಾರು 14500 ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಸಂಖ್ಯೆಯಲ್ಲಿ ಈ ಎರಡು ರಾಜ್ಯಗಳ ಪಾಲು ಶೇಕಡ 65ರಷ್ಟಾಗಿವೆ.

ನಾಲ್ಕು ವಾರಗಳ ಇಳಿಕೆ ಪ್ರವೃತ್ತಿ ಬಳಿಕ ಈ ವಾರ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 68ರಷ್ಟು ಹೆಚ್ಚಿ 4068ನ್ನು ತಲುಪಿದೆ. ಹಿಂದಿನ ವಾರ ದೆಹಲಿಯಲ್ಲಿ 2419 ಪ್ರಕರಣಗಳು ವರದಿಯಾಗಿದ್ದವು. ರಾಜಧಾನಿಯ ನೆರೆಯ ರಾಜ್ಯಗಳಾದ ಹರ್ಯಾಣದಲ್ಲಿ 2029 ಹಾಗೂ ಉತ್ತರ ಪ್ರದೇಶದಲ್ಲಿ 1295 ಪ್ರಕರಣಗಳು ವರದಿಯಾಗಿದ್ದು, ಎರಡು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕ್ರಮವಾಗಿ ಶೇಕಡ 65 ಮತ್ತು 32ರಷ್ಟು ಹೆಚ್ಚಿವೆ.

ದಕ್ಷಿಣ ರಾಜ್ಯಗಳಲ್ಲೂ ಪ್ರಕರಣಗಳು ಗಣನೀಯ ಏರಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ 2975 (ಶೇಕಡ 84 ಏರಿಕೆ), ತಮಿಳುನಾಡಿನಲ್ಲಿ 1299 (63% ಹೆಚ್ಚಳ), ತೆಲಂಗಾಣದಲ್ಲಿ 851 (ಶೇಖಡ 97ರಷ್ಟು ಅಧಿಕ) ಮತ್ತು ಆಂಧ್ರಪ್ರದೇಶದಲ್ಲಿ 117 (86% ಅಧಿಕ)  ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News