×
Ad

ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಈಡಿ ಸಮನ್ಸ್: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Update: 2022-06-13 09:55 IST
Photo:ANI

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸಲು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಈಡಿ)ಸಮನ್ಸ್ ನೀಡಿದ್ದನ್ನು ವಿರೋಧಿಸಿ  ಹಾಗೂ ಬಿಜೆಪಿಯ ಸೇಡಿನ ರಾಜಕೀಯವನ್ನು ಖಂಡಿಸಿ ಇಂದು ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅವರನ್ನು ಬಂಧಿಸಲಾಯಿತು.

ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿದ್ದಾಗ ಅವರನ್ನು ಬಂಧಿಸಿ ಬಸ್‌ಗಳಲ್ಲಿ ಕರೆದೊಯ್ಯುತ್ತಿರುವ  ದೃಶ್ಯಗಳು ಕಂಡುಬಂದಿವೆ. ಪಕ್ಷವು ಶಕ್ತಿ ಪ್ರದರ್ಶನವಾಗಿ ಈ ಪ್ರತಿಭಟನೆಯನ್ನು ಯೋಜಿಸಿರುವ ಕಾರಣ ಸೋಮವಾರ  ಇನ್ನಷ್ಟು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿಯುವ ನಿರೀಕ್ಷೆಯಿದೆ.

ಅಕ್ರಮ ಹಣ ವರ್ಗಾವಣೆ  ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಮುಂದೆ ರಾಹುಲ್  ಗಾಂಧಿ ಇಂದು ಹಾಜರಾಗಲಿದ್ದಾರೆ. ಏಜೆನ್ಸಿ ಕಚೇರಿ ಬಳಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

" ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ" ಮತ್ತು ವಿವಿಐಪಿ ಚಳುವಳಿಗಳನ್ನು ಉಲ್ಲೇಖಿಸಿ ದಿಲ್ಲಿ ಪೊಲೀಸರು ರವಿವಾರ ರಾತ್ರಿ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರು. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.

ನಂತರ ಪಕ್ಷವು ದಿಲ್ಲಿ  ಮತ್ತು ಇತರ ಹಲವಾರು ನಗರಗಳಲ್ಲಿ ಯೋಜಿಸಲಾದ ಪ್ರತಿಭಟನೆಯೊಂದಿಗೆ ಮುಂದುವರಿಯಲು ನಿರ್ಧರಿಸಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ  ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಜಾರಿ ನಿರ್ದೇಶನಾಲಯ ಹಾಗೂ  ಇತರ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ತನ್ನ ನಾಯಕರ ವಿರುದ್ಧದ ಆರೋಪಗಳು "ನಕಲಿ ಹಾಗೂ  ಆಧಾರರಹಿತ" ಎಂದು ಕಾಂಗ್ರೆಸ್ ಹೇಳಿದ್ದು,ಬಿಜೆಪಿಯು "ಸೇಡಿನ ರಾಜಕೀಯ"  ಮಾಡುತ್ತಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News