ಅಧಿಕಾರದಲ್ಲಿ ಇರುವವರು ಹೊಣೆಗಾರಿಕೆಯಿಂದ ವರ್ತಿಸಬೇಕು

Update: 2022-06-13 18:29 GMT

ಹೊಸದಿಲ್ಲಿ,ಜೂ.13: ದಿಲ್ಲಿಯಲ್ಲಿ 2020ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ರ್ಯಾಲಿಯೊಂದರಲ್ಲಿ ದ್ವೇಷ ಭಾಷಣಗಳನ್ನು ಮಾಡಿದ್ದ ಆರೋಪದಲ್ಲಿ ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್ ಮತ್ತು ಪ್ರವಿಶ್ ವರ್ಮಾ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ನಿರ್ದೇಶ ಕೋರಿ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ. ಕೇಂದ್ರ ಸರಕಾರದಿಂದ ಕಡ್ಡಾಯ ಮಂಜೂರಾತಿ ಇಲ್ಲ ಎಂಬ ಕಾರಣಕ್ಕೆ ಕಳೆದ ವರ್ಷ ಇಂತಹುದೇ ಮೇಲ್ಮನವಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಉಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.

ಆದಾಗ್ಯೂ ಉಚ್ಚ ನ್ಯಾಯಾಲಯವು ವಿಶೇಷವಾಗಿ ರಾಜಕೀಯ ನಾಯಕರಿಂದ ದ್ವೇಷ ಭಾಷಣದ ವಿಷಯದ ಕುರಿತು ಕಟುವಾದ ಟೀಕೆಗಳನ್ನು ಮಾಡಿತು.

ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ ನ್ಯಾ.ಚಂದ್ರಧಾರಿ ಸಿಂಗ್ ಅವರು, ಚುನಾಯಿತ ಪ್ರತಿನಿಧಿಗಳು,ರಾಜಕೀಯ ಮತ್ತು ಧಾರ್ಮಿಕ ಮುಖಂಡರು ವಿಶೇಷವಾಗಿ ಧರ್ಮ,ಜಾತಿ,ಪ್ರದೇಶ ಅಥವಾ ಜನಾಂಗೀಯತೆಯ ಆಧಾರದಲ್ಲಿ ದ್ವೇಷ ಭಾಷಣಗಳನ್ನು ಮಾಡುವುದು ಭ್ರಾತೃತ್ವದ ಪರಿಕಲ್ಪನೆಗೆ ವಿರುದ್ಧವಾಗಿದೆ. ಇಂತಹ ಜನರು ಸಾಂವಿಧಾನಿಕ ನೀತಿಗಳನ್ನು ಬುಡಮೇಲುಗೊಳಿಸುತ್ತಾರೆ ಮತ್ತು ಸಂವಿಧಾನದಡಿ ಖಚಿತಪಡಿಸಲಾಗಿರುವ ಸಮಾನತೆ ಮತ್ತು ಸ್ವಾತಂತ್ರವನ್ನು ಉಲ್ಲಂಘಿಸುತ್ತಾರೆ. ಇದು ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಕರ್ತವ್ಯಗಳಿಗೆ ಘೋರ ಅವಮಾನವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

 ದ್ವೇಷ ಭಾಷಣವನ್ನು ಉದ್ದೇಶಿತ ಸಮುದಾಯದ ವಿರುದ್ಧ ತಾರತಮ್ಯದಿಂದ ಹಿಡಿದು ಹೊರಗಿಡುವವರೆಗೆ,ಗಡಿಪಾರು ಮತ್ತು ನರಮೇಧದಂತಹ ದಾಳಿಗಳ ಆರಂಭ ಬಿಂದು ಎಂದು ಬಣ್ಣಿಸಿದ ನ್ಯಾಯಾಲಯವು, ಇಂತಹ ಕೃತ್ಯಗಳಲ್ಲಿ ಅಥವಾ ಭಾಷಣಗಳಲ್ಲಿ ತೊಡಗಿಸಿಕೊಳ್ಳುವುದು ನಾಯಕರಿಗೆ ಉಚಿತವಲ್ಲ ಎಂದು ತಿಳಿಸಿತು.

ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯ ಉದಾಹರಣೆಯನ್ನು ನೀಡಿದ ನ್ಯಾಯಾಲಯವು,ದ್ವೇಷ ಭಾಷಣವು ನಿರ್ದಿಷ್ಟವಾಗಿ ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News