ಉತ್ತರ ಪ್ರದೇಶದ ನಿರುದ್ಯೋಗ ದರ ಕುರಿತು ಆದಿತ್ಯನಾಥ್ ಹೇಳಿಕೆಯಲ್ಲಿ ಹುರುಳಿಲ್ಲ: ಫ್ಯಾಕ್ಟ್ ಚೆಕ್
ಹೊಸದಿಲ್ಲಿ,ಜೂ.13: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೂ.3ರಂದು ಉ.ಪ್ರ.ಹೂಡಿಕೆದಾರರ ಶೃಂಗಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜ್ಯದಲ್ಲಿ 2017ರಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಲಕ್ಷಾಂತರ ಯುವಜನರಿಗೆ ಉದ್ಯೋಗಗಳನ್ನು ಒದಗಿಸಿದ್ದು,ನಿರುದ್ಯೋಗ ದರವು ಶೇ.18ರಿಂದ ಶೇ.2.9ಕ್ಕೆ ಇಳಿದಿದೆ ಎಂದು ಹೇಳಿಕೊಂಡಿದ್ದರು. ಇದೀಗ,2017ರಲ್ಲಿ ನಿರುದ್ಯೋಗ ದರವು ಎಂದೂ ಎರಡಂಕಿಗಳನ್ನು ದಾಟಿರಲಿಲ್ಲ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಬಿಡುಗಡೆಗೊಳಿಸಿರುವ ದತ್ತಾಂಶಗಳು ಬೆಟ್ಟು ಮಾಡಿವೆ. ಇದರೊಂದಿಗೆ ಆದಿತ್ಯನಾಥ್ರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಬಯಲಾಗಿದೆ ಎಂದು FactChecker.in ವರದಿ ಮಾಡಿದೆ
ರಾಜ್ಯದಲ್ಲಿ ನಿರುದ್ಯೋಗ ದರವು ಎರಡಂಕಿಗಳನ್ನು ತಲುಪಿತ್ತಾದರೂ ಅದು ಜೂನ್ 2016ರಲ್ಲಿ ಅಖಿಲೇಶ ಯಾದವ ಅವರ ಸರಕಾರವಿದ್ದಾಗ,ಅಂದರೆ ಆದಿತ್ಯನಾಥ್ ಸರಕಾರವು ಅಧಿಕಾರಕ್ಕೆ ಬರುವ ಒಂಭತ್ತು ತಿಂಗಳಿಗೂ ಮೊದಲು. ನಿರುದ್ಯೋಗ ದರವು ತ್ವರಿತವಾಗಿ ಚೇತರಿಸಿಕೊಂಡಿದ್ದು,2017 ಮಾರ್ಚ್‌ನಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದಾಗ ಶೇ.2.4ಕ್ಕೆ ಇಳಿದಿತ್ತು.
ವಾಸ್ತವದಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಮತ್ತು ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಎಪ್ರಿಲ್ 2020ರಲ್ಲಿ ರಾಜ್ಯದ ನಿರುದ್ಯೋಗ ದರವು ಇತ್ತೀಚಿನ ಗರಿಷ್ಠ ಮಟ್ಟವಾದ ಶೇ.21.5ಕ್ಕೆ ಏರಿತ್ತು.
ಈಗಿನ ನಿರುದ್ಯೋಗ ದರ ಕುರಿತಂತೆ ಆದಿತ್ಯನಾಥ್ ಅವರು 2022 ಎಪ್ರಿಲ್‌ಗಾಗಿ ಸಿಎಂಐಇ ದತ್ತಾಂಶಗಳನ್ನು ಪ್ರಸ್ತಾಪಿಸುತ್ತಿದ್ದಂತಿದೆ. ಎಪ್ರಿಲ್‌ನಲ್ಲಿ ಶೇ.2.9ರ ನಿರುದ್ಯೋಗ ದರವನ್ನು ಸಿಎಂಐಇ ಅಂದಾಜಿಸಿದ್ದು,ಇದು ಮೇ ತಿಂಗಳಿಗೆ ಶೇ.3.1ಕ್ಕೆ ಹೆಚ್ಚಿದೆ.
ಹೀಗಾಗಿ ಆದಿತ್ಯನಾಥ ಮುಖ್ಯಮಂತ್ರಿಯಾದಾಗ ನಿರುದ್ಯೋಗ ದರವು ಶೇ.2.4ರಷ್ಟಿತ್ತು ಮತ್ತು ಈಗ ಮೇ 2022ರಲ್ಲಿ ಶೇ.3.1ರಷ್ಟಿದೆ. ಅಂದರೆ ವಾಸ್ತವದಲ್ಲಿ ಇಳಿಕೆಯಾಗುವ ಬದಲು ಶೇ.29ರಷ್ಟು ಏರಿಕೆಯಾಗಿದೆ. ಆದಿತ್ಯನಾಥರ ಹೇಳಿಕೆ ಸುಳ್ಳು ಎನ್ನುವುದನ್ನು ಇದು ಸಾಬೀತುಗೊಳಿಸುತ್ತದೆ ಎಂದು FactChecker.in ವರದಿ ಮಾಡಿದೆ