ಭಾರತದಲ್ಲಿ ಪಬ್‌ಜಿ ಆಟ ಇನ್ನೂ ಯಾಕೆ ಲಭ್ಯವಿದೆ? : ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಎನ್‌ಸಿಪಿಸಿಆರ್

Update: 2022-06-14 17:50 GMT
Photo: PUBG

ಹೊಸದಿಲ್ಲಿ, ಜೂ. ೧೪: ಆನ್‌ಲೈನ್ ಆಟ ಪಬ್‌ಜಿ ಭಾರತದಲ್ಲಿ ಈಗಲೂ ಯಾಕೆ ಲಭ್ಯವಿದೆ ಎಂಬ ಬಗ್ಗೆ ವಿವರಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಕೇಂದ್ರ ಸರಕಾರದ ಅಧಿಕಾರಿಗಳನ್ನು ಪ್ರಶ್ನಿಸಿದೆ.

ಪಬ್‌ಜಿ  ಮೊಬೈಲ್ ಹಾಗೂ ಅದರ  ಲಘು ಆವೃತ್ತಿ ಪಬ್‌ಜಿ ಲೈಟ್ ಸೇರಿದಂತೆ ಚೀನಾದ ೧೧೮ ಆ್ಯಪ್‌ಗಳನ್ನು ಕೇಂದ್ರ ಸರಕಾರ 2020 ಸೆಪ್ಟಂಬರ್ 02ರಂದು ರದ್ದುಗೊಳಿಸಿತ್ತು. ‘‘ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆ, ಭಾರತದ ರಕ್ಷಣೆ, ರಾಷ್ಟ್ರದ ರಕ್ಷಣೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಬಗ್ಗೆ ಈ ಆ್ಯಪ್‌ಗಳು ಪೂರ್ವಾಗ್ರಹ ಹೊಂದಿವೆ’’ ಎಂದು ಕೇಂದ್ರ ಸರಕಾರ ಹೇಳಿತ್ತು.

ತನ್ನ ಮೊಬೈಲ್ ಆವೃತ್ತಿ ಇನ್ನು ಮುಂದೆ ಭಾರತದ ಬಳಕೆದಾರರಿಗೆ ಸಿಗಲಾರದು ಎಂದು 2020 ಅಕ್ಟೋಬರ್ ೩೦ರಂದು ಪಬ್‌ಜಿ ಹೇಳಿತ್ತು.

ಲಕ್ನೋದಲ್ಲಿ ವೀಡಿಯೊ ಆಟ ಆಡದಂತೆ ತಡೆದ ತನ್ನ ತಾಯಿಯನ್ನು 16 ವರ್ಷದ ಬಾಲಕನೋರ್ವ ಗುಂಡು ಹಾರಿಸಿ ಹತ್ಯೆಗೈದ ಘಟನೆ ಕುರಿತು ಆಯೋಗದ ವರಿಷ್ಠೆ ಪ್ರಿಯಾಂಕಾ ಕನೂಂಗೂ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕಾನೂನು ಬದ್ಧವಾಗಿ ಸ್ಥಗಿತಗೊಳಿಸಿದ ಹೊರತಾಗಿಯೂ ಈ ಆಟ ಯಾಕೆ ಲಭ್ಯವಿದೆ ಎಂದು ಅವರು ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ  ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾವೆಹ್ನೆ ಅವರನ್ನು ಪ್ರಶ್ನಿಸಿದ್ದಾರೆ.

‘‘ಈ ಪತ್ರವನ್ನು ಸ್ವೀಕರಿಸಿದ ೧೦ ದಿನಗಳ ಒಳಗೆ ಅಂತಹ ಘಟನೆಗಳಲ್ಲಿ ತೆಗೆದುಕೊಂಡ ಕ್ರಮಗಳ ಕುರಿತ ಮಾಹಿತಿಯನ್ನು ಆಯೋಗಕ್ಕೆ ನೀಡಬಹುದು. ಅಲ್ಲದೆ, ಅಪ್ರಾಪ್ತರು ಬಳಸುತ್ತಿರುವ ಅಂತಹ ಆಟಗಳ ಪಟ್ಟಿಯನ್ನು ಅದರ ನಿಯಂತ್ರಕ ಸಂಸ್ಥೆ ಹಾಗೂ ನಿಯಂತ್ರಕ ವ್ಯವಸ್ಥೆಯೊಂದಿಗೆ ಒದಗಿಸಬಹುದು ಎಂದು ವಿನಂತಿಸಲಾಗಿದೆ’’ ಎಂದು ಕನೂಂಗೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News