×
Ad

ಮಾಲಿನ್ಯದಿಂದ ದಿಲ್ಲಿಯಲ್ಲಿ 10 ವರ್ಷಗಳ ಜೀವಿತಾವಧಿ ಕಡಿತ: ವರದಿ

Update: 2022-06-14 23:40 IST

ನ್ಯೂಯಾರ್ಕ್, ಜೂ.14: ಪಳೆಯುಳಿಕೆ ಇಂಧನದ ಬಳಕೆಯಿಂದ ಉಂಟಾಗುವ ಅತೀ ಸೂಕ್ಷ್ಮ ವಾಯುಮಾಲಿನ್ಯವು ಭಾರತದ ರಾಜಧಾನಿ ದಿಲ್ಲಿಯಲ್ಲಿನ ಜೀವಿತಾವಧಿಯಲ್ಲಿ 10 ವರ್ಷಗಳ ನಷ್ಟಕ್ಕೆ ಕಾರಣವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

  ವಿಶ್ವದ ಅತ್ಯಧಿಕ ಮಾಲಿನ್ಯದ ನಗರಗಳ ಪಟ್ಟಿಯಲ್ಲಿರುವ ದಿಲ್ಲಿಯಲ್ಲಿ ಪಿಎಂ 2.5 ಮಾಲಿನ್ಯ ಎಂದು ಕರೆಯಲಾಗುವ ಅತೀ ಸೂಕ್ಷ್ಮ ಮಾಲಿನ್ಯವು ಹೃದಯಾಘಾತಕ್ಕೆ ಮತ್ತು ಶ್ವಾಸಕೋಶದ ಕಾಯಿಲೆಗೆ ಕಾರಣವಾಗಲಿದ್ದು ಜನರ ಜೀವಿತಾವಧಿಯಲ್ಲಿ 10 ವರ್ಷಗಳ ಕಡಿತಕ್ಕೆ ಕಾರಣವಾಗಲಿದೆ. ಇದೇ ಸಮಸ್ಯೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜೀವಿತಾವಧಿಯ 8 ವರ್ಷ ಕಡಿತಕ್ಕೆ ಕಾರಣವಾಗಲಿದೆ ಎಂದು ಚಿಕಾಗೊ ವಿವಿಯ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್(ಇಪಿಐಸಿ) ಮಂಗಳವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ.

ವಾಯು ಗುಣಮಟ್ಟವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡದ ಹಂತ ತಲುಪಿದರೆ ದಕ್ಷಿಣ ಏಶ್ಯಾದ್ಯಂತ ವ್ಯಕ್ತಿಯ ಸರಾಸರಿ ಜೀವಿತಾವಧಿ 5 ವರ್ಷ ಹೆಚ್ಚಬಹುದು. ವಿಶ್ವದಾದ್ಯಂತ ವಾಯುಮಾಲಿನ್ಯದಿಂದ ಮನುಷ್ಯನ ಜೀವಿತಾವಧಿ ಸುಮಾರು 2 ವರ್ಷ ಕಡಿತವಾಗುತ್ತಿದೆ ಎಂದು ವರದಿ ಹೇಳಿದೆ. ಮನುಷ್ಯನ ಕೂದಲಿಗಿಂತಲೂ ತೆಳ್ಳಗಿರುವ ಪಿಎಂ2.5 ಮಾಲಿನ್ಯ ಮಟ್ಟವು ನೇರವಾಗಿ ಶ್ವಾಸಕೋಶ ಮತ್ತು ರಕ್ತದ ಚಲನೆಗೆ ಸೇರಿಕೊಂಡು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದು ಕ್ಯಾನ್ಸರ್ ಉಂಟುಮಾಡುವ ಅಂಶ ಎಂದು 2013ರಲ್ಲಿ ಅಮೆರಿಕ ಘೋಷಿಸಿದೆ. ಸ್ವಚ್ಛ ಗಾಳಿಯು ಮಾನವನ ಜೀವಿತಾವಧಿಗೆ ಹೆಚ್ಚುವರಿ ವರ್ಷಗಳನ್ನು ಸೇರಿಸುತ್ತದೆ. ಜಾಗತಿಕ ವಾಯುಮಾಲಿನ್ಯವನ್ನು ಶಾಶ್ವತವಾಗಿ ಕಡಿಮೆಗೊಳಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿಸಿದರೆ ಸರಾಸರಿ ಜೀವಿತಾವಧಿಗೆ 2.5 ವರ್ಷ ಸೇರ್ಪಡೆಯಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತ ಬಾಂಗ್ಲಾದಲ್ಲಿ 15ಪಟ್ಟು, ಭಾರತದಲ್ಲಿ 10 ಪಟ್ಟು, ನೇಪಾಳ ಮತ್ತು ಪಾಕಿಸ್ತಾನದಲ್ಲಿ ತಲಾ 9 ಪಟ್ಟು ಹೆಚ್ಚಿನ ಮಾಲಿನ್ಯವಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News