ಅಸ್ಸಾಂನಲ್ಲಿ ಭೀಕರ ಪ್ರವಾಹ: 44ಕ್ಕೆ ಏರಿದ ಮೃತರ ಸಂಖ್ಯೆ
ದಿಸ್ಪುರ, ಜೂ. 16: ರಾಜ್ಯದ ಗೋಲಪಾರ ಪಟ್ಟಣದಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಅಪ್ರಾಪ್ತರು ಜೀವಂತ ಸಮಾಧಿ ಆಗುವುದರೊಂದಿಗೆ ಅಸ್ಸಾಂನಲ್ಲಿ ನೆರೆ ಸಂಬಂಧಿ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿದೆ. ಅವರ ಮೃತದೇಹಗಳನ್ನು ರಾಜ್ಯ ವಿಪತ್ತು ಪ್ರತಿಸ್ಪಂದನಾ ಪಡೆ ಪತ್ತೆ ಮಾಡಿದೆ.
ಅಸ್ಸಾಂನ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆ ಸುರಿಯತ್ತಿದೆ. ಗುವಾಹತಿಯಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ನಿರ್ಮಾಣ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೇಘಾಲಯದೊಂದಿಗೆ ರಾಜ್ಯ ಬುಧವಾರದ ವರೆಗೆ ಕಳೆದ 7 ದಿನಗಳ ಕಾಲ ಶೇ. 125ಕ್ಕೂ ಅಧಿಕ ಸಾಮಾನ್ಯ ಮಳೆ ಸ್ವೀಕರಿಸಿದೆ. ಹವಾಮಾನ ಇಲಾಖೆ ಎರಡು ರಾಜ್ಯಗಳಲ್ಲಿ ಜೂನ್ 17ರ ವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆ ಸುರಿಯಬಹುದೆಂದು ಮುನ್ನೆಚ್ಚರಿಕೆ ನೀಡಿದೆ.
ಭಾರೀ ಮಳೆ ಸುರಿದ ಪರಿಣಾಮ ಬ್ರಹ್ಮಪುತ್ರ ನದಿ ಹಾಗೂ ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಸ್ಸಾಂನ 35 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಲ್ಲಿ ನೆರೆ ಉಂಟಾಗಿದೆ.
ಖಾಂದೋಂಗ್ ಅಣೆಕಟ್ಟಿನಲ್ಲಿ ಸ್ಥಾಪಿಸಿರುವ 275 ಮೆಗಾವ್ಯಾಟ್‌ನ ಕೊಪಿಲಿ ಜಲ ವಿದ್ಯುತ್ ಯೋಜನೆಯಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೊಜಾಯಿ ಹಾಗೂ ದಿಮಾ ಹಸಾವೊದಲ್ಲಿರುವ ಜಿಲ್ಲೆಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಣೆಕಟ್ಟಿನ ಹೆಚ್ಚುವರಿ ನೀರು ಕೊಪಿಲಿ ಹಾಗೂ ಬ್ರಹ್ಮಪುತ್ರಾ ನದಿಗಳಲ್ಲಿ ನೀರಿನ ಮಟ್ಟವನ್ನು ಏರಿಕೆ ಮಾಡಲಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿ ದಿಮಾ ಹಸಾವೋ ಉಪ ಆಯುಕ್ತ ನಝ್ರೀನ್ ಅಹ್ಮದ್ ಅವರು ಸಲಹೆ ನೀಡಿದ್ದಾರೆ. ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಿಂದ ಪರಿಹಾರ ಶಿಬಿರಗಳಿಗೆ ವರ್ಗಾವಣೆಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ತುರ್ತು ಅಥವಾ ಅಗತ್ಯದ ಕಾರಣಕ್ಕೆ ಮಾತ್ರ ಮನೆಯಿಂದ ಹೊರಗಿಳಿಯಿರಿ ಎಂದು ಕಾಮರೂಪ್ ಮೆಟ್ರೋಪಾಲಿಟನ್ ಜಿಲ್ಲಾಡಳಿತ ನಾಗರಿಕರಿಗೆ ಸಲಹೆ ನೀಡಿದೆ.