×
Ad

ಧಾರ್ಮಿಕ ಭಾವನೆಗಳಿಗೆ ಕಿರಣ್‌ ಬೇಡಿ ನೋವುಂಟು ಮಾಡಿದ ಪ್ರಕರಣ: ವರದಿ ಕೇಳಿದ ಅಲ್ಪಸಂಖ್ಯಾತ ಆಯೋಗ

Update: 2022-06-16 15:26 IST
ಕಿರಣ್‌ ಬೇಡಿ ( Photo: Twitter/ Kiran Bedi)

ಹೊಸದಿಲ್ಲಿ: ಪುದುಚ್ಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಸಿಖ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆನ್ನಲಾದ ಆರೋಪ ಕುರಿತಂತೆ ತನಗೆ ದೂರು ಬಂದಿದೆ ಎಂದು ಹೇಳಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಈ ಕುರಿತು ದಿಲ್ಲಿಯ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದೆ.

ತಮ್ಮ ಕೃತಿ 'ಫಿಯರ್ಲೆಸ್ ಗವರ್ನೆನ್ಸ್ ಇನ್ ಚೆನ್ನೈ' ಇದರ ಬಿಡುಗಡೆ ಸಮಾರಂಭದ ವೇಳೆ ಬೇಡಿ ಅವರು ಸಿಖ್ ಸಮುದಾಯ ಕುರಿತಂತೆ ಹಾಸ್ಯ ಚಟಾಕಿ ಹಾರಿಸಿದ್ದರೆನ್ನಲಾಗಿದೆ. "ಇದು ಸಿಖ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿರುವುದರಿಂದ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಈ ಕುರಿತು ವರದಿ ಕೇಳಿದ್ದಾರೆ,'' ಎಂದು ಆಯೋಗದ ಹೇಳಿಕೆ ತಿಳಿಸಿದೆ.

ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಆಯೋಗ ಹೇಳಿದೆ.

ಈ ನಡುವೆ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಗುರುದ್ವಾರಗಳ ನಿರ್ವಹಣೆ ನಡೆಸುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ತಾನು ಕಿರಣ್ ಬೇಡಿಗೆ ಕಾನೂನು ನೋಟಿಸ್ ಕಳುಹಿಸುವುದಾಗಿ ಹೇಳಿದೆ.

"ಸಿಖರ ಕುರಿತಂತೆ ಆಕೆಯ ಹೇಳಿಕೆಗಳು ಆಘಾತಕಾರಿ ಹಾಗೂ ಅವಮಾನಕಾರಿ ಹಾಗೂ ಇಡೀ ಸಮುದಾಯಕ್ಕೆ ನೋವುಂಟು ಮಾಡಿದೆ,'' ಎಂದು ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ.

ತಮ್ಮ ಹೇಳಿಕೆಗೆ ಮಂಗಳವಾರ ಟ್ವೀಟ್ ಮೂಲಕ ಕ್ಷಮೆಯಾಚಿಸಿರುವ ಕಿರಣ್ ಬೇಡಿ, ಯಾರಿಗಾದರೂ ನೋವುಂಟು ಮಾಡುವವರಲ್ಲಿ ನಾನು  ಕೊನೆಯ ವ್ಯಕ್ತಿ, ನಾನು ಸೇವೆ, ಪ್ರೀತಿಯ ಮೇಲೆ ನಂಬಿಕೆಯಿರಿಸಿದವಳು,'' ಎಂದಿದ್ದಾರೆ.

ಕ್ಷಮಾಪಣೆ ಕೋರಿದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News