×
Ad

ಬಿಹಾರ: ಮಾಧೆಪುರದಲ್ಲಿ ಬಾರೀ ಹಿಂಸಾಚಾರ ಬಿಜೆಪಿ ಕಾರ್ಯಾಲಯಕ್ಕೆ ಬೆಂಕಿ

Update: 2022-06-17 23:25 IST
photo:twitter/ @Pankajjha_inc

ಮಾಧೆಪುರ,ಜೂ.17: ಅಗ್ನಿಪಥ ಯೋಜನೆಯ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್ಯು)ದ ಸದಸ್ಯರು ಸೇರಿದಂತೆ ಯುವಜನರ ಬೃಹತ್ ಗುಂಪೊಂದು ಬಿಹಾರದ ಮಾಧೆಪು ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಹಿಂಸಾರೂಪವನ್ನು ಪಡೆದಿದ್ದು, ಪ್ರತಿಭಟನಕಾರರು ಬಿಜೆಪಿ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿ, ದಾಂಧಲೆ ನಡೆಸಿದ್ದಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಯುವಕರು, ಕಾಲೇಜ್ಚೌಕ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಿದರು. ಪ್ರತಿಭಟನಕಾರರು ಮಾಧೆಪುರ ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್ ನ ಕಿಟಕಿಗಳನ್ನು ಪುಡಿದ ದಾಂಧಲೆಗೈದಿದ್ದಾರೆ. ಮಾಧೆಪುರ ಬ್ಲಾಕ್ ಕಚೇರಿಯ ಆವರಣಕ್ಕೂ ನುಗ್ಗಿದ ಗುಂಪು, ಶಿಕ್ಷಣ ಇಲಾಖಾ ಕಚೇರಿಯ ಸೊತ್ತುಗಳಿಗೆ ಹಾನಿಯುಂಟು ಮಾಡಿದೆ.

 ರೈಲ್ವೆ ಸೊತ್ತುಗಳಿಗೂ ಪ್ರತಿಭಟನಕಾರರು ಹಾನಿಯುಂಟು ಮಾಡಲು ಯತ್ನಿಸಿದರಾದರೂ, ಸ್ಥಳಕ್ಕೆ ಸಕಾಲದಲ್ಲಿ ಆಗಮಿಸಿದ ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದರು.ಉದ್ರಿಕ್ತ ಪ್ರತಿಭಟನಕಾರರು ಮಾಧೆಪುರದ ಎರಡು ಅಂತಸ್ತುಗಳ ಬಿಜೆಪಿ ಕಾರ್ಯಾಲಯಕ್ಕೂ ಬೆಂಕಿ ಹಚ್ಚಿದ್ದಾರೆ. ದಾಳಿ ನಡೆದಾಗ ಪಕ್ಷದ ಕಚೇರಿಗೆ ಬೀಗ ಹಾಕಲಾಗಿತ್ತು ಹಾಗೂ ಅಲ್ಲಿ ಯಾವುದೇ ಕಾರ್ಯಕರ್ತರಿರಲಿಲ್ಲವೆಂದು ಮೂಲಗಳು ತಿಳಿಸಿವೆ. ಗುಂಪು ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಆರಿಸಿದ್ದಾರೆಂದು ಮೂಲಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News