ದಾವೂದ್‌ ಇಬ್ರಾಹಿಂ ಸಹೋದರನಿಂದ ಕೊಲೆ ಬೆದರಿಕೆ: ಪೊಲೀಸರಿಗೆ ದೂರು ನೀಡಿದ ಸಂಸದೆ ಪ್ರಜ್ಞಾ ಸಿಂಗ್‌

Update: 2022-06-18 17:07 GMT

ಹೊಸದಿಲ್ಲಿ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ತಮಗೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹೋದರನಿಂದ ಬೆದರಿಕೆ ಕರೆ ಬಂದಿದೆ ಎಂದು ದೂರು ನೀಡಿದ್ದಾರೆ, ಇದರಲ್ಲಿ ಕರೆ ಮಾಡಿದ ವ್ಯಕ್ತಿ ತನ್ನನ್ನು ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್‌ನ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದು, "ಮುಸ್ಲಿಮರ ವಿರುದ್ಧ ವಿಷವನ್ನು ಹರಡುವುದಕ್ಕಾಗಿ" ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜ್ಞಾ ಠಾಕೂರ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯೊಂದಿಗೆ ಮಾತನಾಡಿದ ಕಾಲ್‌ ರೆಕಾರ್ಡ್‌ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.  ಭೋಪಾಲ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಜ್ಞಾ ಸಿಂಗ್‌ ಅವರು ಶನಿವಾರ ಮುಂಜಾನೆ ಈ ಬಗ್ಗೆ ಟಿ ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆದರಿಕೆ ಕರೆ ಬಂದಿರುವ ಕುರಿತು ಆಕೆ ನೀಡಿದ ದೂರಿನ ಮೇರೆಗೆ ಶನಿವಾರ ಮುಂಜಾನೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು 507 (ಅನಾಮಧೇಯ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಟಿಟಿ ನಗರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಆಕೆಗೆ ಕರೆ ಬಂದಿದ್ದು, ಅದರಲ್ಲಿ ಇಕ್ಬಾಲ್ ಕಸ್ಕರ್‌ಗೆ ಆತ್ಮೀಯ ಎಂದು ಹೇಳಿಕೊಂಡ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News