ಆಗ ಒಡಿಶಾ ಕುಗ್ರಾಮದ ಶಿಕ್ಷಕಿ, ಈಗ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿ ಅಭ್ಯರ್ಥಿ

Update: 2022-06-21 17:15 GMT

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಆಢಳಿತಾರೂಢ  ಎನ್ ಡಿ ಎ ಮೈತ್ರಿಕೂಟದ  ಅಭ್ಯರ್ಥಿಯಾಗಿ ಒಡಿಶಾದ  ಬುಡಕಟ್ಟು ಜನಾಂಗದ ಮಹಿಳಾ ನಾಯಕಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.  

ಪ್ರಧಾನಿ ನರೇಂದ್ರ ಮೋದಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿದ ಬಳಿಕ ಅಭ್ಯರ್ಥಿಯನ್ನು ಘೋಷಿಸಿದ್ದಾರೆ.

64 ವರ್ಷದ ದ್ರೌಪದಿ ಮುರ್ಮು ಅವರು ಈ ಬಾರಿ ಚುನಾಯಿತರಾದರೆ, ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಲಿದ್ದಾರೆ. ಹಾಗೆಯೆ ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.

ಜಾರ್ಖಂಡ್‌ ನ ಒಂಭತ್ತನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿರುವ ಮುರ್ಮು ಅವರು ಒಡಿಶಾದಿಂದ ಎರಡು ಬಾರಿ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಬಿಜೆಡಿಯು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ನವೀನ್ ಪಟ್ನಾಯಕ್ ಸಂಪುಟದಲ್ಲಿ ಸಚಿವರಾಗಿದ್ದರು.  ಮಾರ್ಚ್ 6, 2000 ದಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿದ್ದರೆ, ಆಗಸ್ಟ್ 6, 2002 ರಿಂದ ಮೇ 16, 2004 ರವರೆಗೆ ಮೀನುಗಾರಿಕೆ ಮತ್ತು ಪಶು ಸಂಗೋಪನಾ  ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿರುವ ಮುರ್ಮು ಅವರು, ರಾಜ್ಯವೊಂದರಲ್ಲಿ ಗವರ್ನರ್ ಆಗಿ ನೇಮಕಗೊಂಡ ಒಡಿಶಾದ ಮೊದಲ ಬುಡಕಟ್ಟು ನಾಯಕಿ ಕೂಡಾ ಆಗಿದ್ದಾರೆ. 

ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ದ್ರೌಪದಿ ಅವರು 1997ರಲ್ಲಿ ರಾಜಕೀಯಕ್ಕೆ ಬಂದರು. ಅದೇ ವರ್ಷ ಬಿಜೆಪಿಯಿಂದ  ಕೌನ್ಸಿಲರ್ ಆದರು. ನಂತರ ರಾಯರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾಗಿದ್ದರು. 2013ರಲ್ಲಿ ಅವರು ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರಿಗೆ ರಾಜಕೀಯ ಜೀವನದಲ್ಲಿ ಎರಡುವರೆ ದಶಕಗಳ ಅನುಭವವಿದೆ.

ಬಿಜೆಪಿ ಸಂಸದೀಯ ಮಂಡಳಿಯು ರಾಷ್ಟ್ರಪತಿ ಅಭ್ಯರ್ಥಿಗೆ 20 ಹೆಸರುಗಳನ್ನು ಚರ್ಚಿಸಿ ಬಳಿಕ ದ್ರೌಪದಿ ಅವರ ಹೆಸರನ್ನು ಅಂತಿಮಗೊಳಿಸಿದೆ. ಪೂರ್ವ ಭಾರತದಿಂದ ಒಬ್ಬ ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News