ಅಖ್ಲಾಕ್ ಹತ್ಯೆ ಪ್ರಕರಣ: ಸಾಕ್ಷಿಗೆ ಭದ್ರತೆಯ ಕೊರತೆಯಿಂದಾಗಿ ವಿಚಾರಣೆ ಮುಂದೂಡಿದ ಕೋರ್ಟ್

Update: 2022-06-21 18:59 GMT
photo: AFP

ಹೊಸದಿಲ್ಲಿ,ಜೂ.21: ಮುಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣದಲ್ಲಿಯ ಸಾಕ್ಷಿಗೆ ತನ್ನೆದುರು ಹಾಜರಾಗಲು ಸಾಧ್ಯವಾಗದಿದ್ದಕ್ಕೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡೆದ ತ್ವರಿತ ನ್ಯಾಯಾಲಯವು ವಿಚಾರಣೆಯನ್ನು ಜು.4ರವರೆಗೆ ಮುಂದೂಡಿದೆ.2015,ಸೆ.28ರಂದು ಉ.ಪ್ರದೇಶದ ಗೌತಮ ಬುದ್ಧ ನಗರದ ಬಿಸಾಡಾ ಗ್ರಾಮದಲ್ಲಿ ಗುಂಪೊಂದು ಗೋಮಾಂಸವನ್ನು ಮನೆಯಲ್ಲಿ ಇರಿಸಿಕೊಂಡಿರುವ ಶಂಕೆಯಲ್ಲಿ 52ರ ಹರೆಯದ ಅಖ್ಲಾಕ್ರನ್ನು ಥಳಿಸಿ ಹತ್ಯೆಗೈದಿತ್ತು.

ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ,ಅಖ್ಲಾಕ್ರ ಪುತ್ರಿ ಶಾಯಿಸ್ತಾರಿಗೆ ಸೋಮವಾರ ಭದ್ರತೆಯ ಕೊರತೆಯಿಂದಾಗಿ ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಪರ ವಕೀಲ ಯೂಸುಫ್ ಸೈಫಿ ತಿಳಿಸಿದರು. ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಭಾರತ ಬಂದ್ಗೆ ಕರೆ ನೀಡಲಾಗಿದ್ದರಿಂದ ಜಿಲ್ಲೆಯ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಲ್ಲಿ ತೊಡಗಿಕೊಂಡಿದ್ದರು ಎಂದರು.ಶಾಯಿಸ್ತಾ ಜೂ.14ರಂದು ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಅನಿಲ ಕುಮಾರ ಸಿಂಗ್ ಅವರ ಎದುರು ತನ್ನ ಹೇಳಿಕೆಯನ್ನು ದಾಖಲಿಸುವುದನ್ನು ಆರಂಭಿಸಿದ್ದರು. ಜೂ.17ರಂದು ಅವರು ತನ್ನ ಹೇಳಿಕೆಯನ್ನು ಮುಂದುವರಿಸಬೇಕಿತ್ತು. ಆದರೆ ಅಂದೂ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯದಲ್ಲಿ ತೊಡಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಸೋಮವಾರ ಪ್ರಕರಣದ ವಿಚಾರಣೆಯನ್ನು ಎರಡನೇ ಬಾರಿ ಮುಂದೂಡಲಾಗಿದೆ.

ಅಖ್ಲಾಕ್ರ ಪತ್ನಿ ಇಕ್ರಮಾನ್ ಮತ್ತು ತಾಯಿ ಅಸ್ಗರಿ ಅವರೂ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಗಳನ್ನು ನೀಡಲಿದ್ದಾರೆ.
ಎಪ್ರಿಲ್ 2016ರಲ್ಲಿ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಪ್ರಸ್ತುತ ಎಲ್ಲ 19 ಆರೋಪಿಗಳು ಜಾಮೀನಿನಲ್ಲಿ ಹೊರಗಿದ್ದಾರೆ. ಈ ಪೈಕಿ 16 ಆರೋಪಿಗಳು ಮಾರ್ಚ್ 2019ರಲ್ಲಿ ಬಿಸಾಡಾದಲ್ಲಿ ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಚುನಾವಣಾ ರ್ಯಾಲಿಯಲ್ಲಿ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News