ʼಬುಲ್ಡೋಝರ್‌ ನ್ಯಾಯʼ: ಶೀಘ್ರ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಮಾಜಿ ಅಧಿಕಾರಿಗಳ ಪತ್ರ

Update: 2022-06-22 18:23 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಬಿಜೆಪಿ ಮುಖಂಡರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದವರ ಆಸ್ತಿಗಳನ್ನು ಧ್ವಂಸಗೊಳಿಸಿರುವ ಬಗ್ಗೆ ಗಮನ ಹರಿಸುವಂತೆ ಮಾಜಿ ಅಧಿಕಾರಿಗಳ ಗುಂಪು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರನ್ನು ಒತ್ತಾಯಿಸಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ.

ಕಾನೂನುಬದ್ಧವಾಗಿ ಪ್ರತಿಭಟಿಸಲು ಅಥವಾ ಸರ್ಕಾರವನ್ನು ಟೀಕಿಸಲು ಧೈರ್ಯವಿರುವ ನಾಗರಿಕರಿಗೆ   "ಬುಲ್ಡೋಝರ್ ನ್ಯಾಯ" ಹಾಗೂ ಕ್ರೂರ ಶಿಕ್ಷೆಯನ್ನು ವಿಧಿಸುವ ಪರಿಕಲ್ಪನೆಯು ದೇಶದಲ್ಲಿ ರೂಢಿಯಾಗುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. 

"ತಪ್ಪಿತಸ್ಥ ಎಂದು ಸಾಬೀತುಪಡಿಸುವವರೆಗೂ ನಿರಪರಾಧಿ" ಎಂದು ಪರಿಗಣಿಸುವ ಕಲ್ಪನೆಯನ್ನು ತಲೆಕೆಳಗಾಗಿ ಮಾಡಲಾಗುತ್ತಿದೆ. ಸಾಂವಿಧಾನಿಕ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿ ವಹಿಸುತ್ತಿರುವ ಇದಕ್ಕೆ ಬಹುಸಂಖ್ಯಾತ ಶಕ್ತಿಯ ದುರಹಂಕಾರವಿದೆ ಎಂದು ಪತ್ರದಲ್ಲಿ ಹೇಳಿರುವುದಾಗಿ thewire ವರದಿ ಮಾಡಿದೆ. 

ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿಗಳಾದ ಜೂಲಿಯೊ ರಿಬೇರೊ, ಅವಿನಾಶ್ ಮೋಹನಾನೆ, ಮ್ಯಾಕ್ಸ್‌ವೆಲ್ ಪೆರೇರಾ ಮತ್ತು ಎ ಕೆ ಸಮಂತಾ ಮತ್ತು ಮಾಜಿ ಸಾಮಾಜಿಕ ನ್ಯಾಯ ಕಾರ್ಯದರ್ಶಿ ಅನಿತಾ ಅಗ್ನಿಹೋತ್ರಿ ಸೇರಿದಂತೆ 90 ನಿವೃತ್ತ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಮೇ 26 ರಂದು ಟೈಮ್ಸ್ ನೌ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ಈ ತಿಂಗಳ ಆರಂಭದಲ್ಲಿ ಭಾರತದ ಹಲವಾರು ಭಾಗಗಳಲ್ಲಿ ಅದು ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಬಿಜೆಪಿಯ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥರಾಗಿದ್ದ ನವೀನ್ ಜಿಂದಾಲ್ ಅವರು ಜೂನ್ 1 ರಂದು ಪ್ರವಾದಿಯವರ ಬಗ್ಗೆ ಅವಹೇಳನಕಾರಿ ವಿಷಯದೊಂದಿಗೆ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. 

ಇದರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದ್ದು, ಕುಮಾರ್ ಅವರನ್ನು ಉಚ್ಚಾಟಿಸಲಾಗಿದೆ. ಈ ಸಂಬಂಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಉತ್ತರ ಪ್ರದೇಶವೊಂದರಲ್ಲೇ 10 ಜಿಲ್ಲೆಗಳಿಂದ 415 ಮಂದಿಯನ್ನು ಬಂಧಿಸಲಾಗಿದೆ.

ಜೂನ್ 11 ರಂದು, ಕಾನ್ಪುರ ಮತ್ತು ಸಹರಾನ್ಪುರ್ ಆಡಳಿತಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೂವರ ಆಸ್ತಿಗಳನ್ನು ಭಾಗಶಃ ನೆಲಸಮಗೊಳಿಸಿದ್ದವು. ಮರುದಿನ, ಪ್ರಯಾಗ್‌ರಾಜ್ ಆಡಳಿತವು ಹೋರಾಟಗಾರ ಜಾವೇದ್ ಮಹಮ್ಮದ್ ಅವರ ಮನೆಯನ್ನು ಕೆಡವಿದ್ದು, ನಗರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲು ಸಂಚು ರೂಪಿಸಿದ ಆರೋಪವನ್ನು ಅವರ ಮೇಲೆ ಹೋರಿಸಿದೆ. 

ಆರೋಪಿಗಳ ಮನೆಯನ್ನು ಕೆಡವಲು ಭಾರತೀಯ ಕಾನೂನಿನಡಿಯಲ್ಲಿ ಯಾವುದೇ ನಿಬಂಧನೆಗಳಿಲ್ಲದಿದ್ದರೂ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಮಾದರಿಯನ್ನು ನಿಯಮಿತವಾಗಿ ನಡೆಸುತ್ತಾ ಬಂದಿದೆ. 

 "ಉನ್ನತ ಮಟ್ಟದಲ್ಲಿ ನ್ಯಾಯಾಂಗವು ತ್ವರಿತವಾಗಿ, ದೃಢವಾಗಿ ಮತ್ತು ನಿರ್ಣಾಯಕವಾಗಿ ಮಧ್ಯಪ್ರವೇಶಿಸದಿದ್ದರೆ, ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಬಹಳ ಎಚ್ಚರಿಕೆಯಿಂದ ಮತ್ತು ನಿಖರವಾಗಿ ನಿರ್ಮಿಸಲಾದ ಸಾಂವಿಧಾನಿಕ ಆಡಳಿತದ ಸಂಪೂರ್ಣ ಕಟ್ಟಡವು ಕುಸಿಯುವ ಸಾಧ್ಯತೆಯಿದೆ ಎಂದು ನಾವು ನಂಬುತ್ತೇವೆ." ಎಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ. 

"ರಾಜಕೀಯ ಉದ್ದೇಶಗಳಿಗಾಗಿ ಮುನ್ಸಿಪಲ್ ಮತ್ತು ನಾಗರಿಕ ಕಾನೂನುಗಳ ದುರುಪಯೋಗ" ಮತ್ತು ಆಡಳಿತಾತ್ಮಕ ಮತ್ತು ಪೋಲೀಸ್ ವ್ಯವಸ್ಥೆಯನ್ನು " ಬಹುಸಂಖ್ಯಾತ ದಮನದ ಕ್ರೂರ ಸಾಧನವಾಗಿ" ಪರಿವರ್ತಿಸುವ ದೊಡ್ಡ ನೀತಿಯ ಒಂದು ಸಣ್ಣ ಭಾಗವಾಗಿದೆ ಎಂದು ಗುಂಪು ಹೇಳಿದೆ ಎಂದು scroll.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News