ವಿದ್ವಾಂಸರು ತಮ್ಮ ಸ್ಥಾನಗೌರವಕ್ಕೆ ತಕ್ಕಂತೆ ನಡೆದುಕೊಳ್ಳಲಿ

Update: 2022-06-26 03:28 GMT

ರಾಜ್ಯದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಅವರು ಸಮಾಜವಿಜ್ಞಾನ ಮತ್ತು ಭಾಷಾ ಪಠ್ಯಪುಸ್ತಕಗಳಲ್ಲಿ ಈ ಸಾಲಿನಲ್ಲಿ ತಂದಿರುವ ಬದಲಾವಣೆಗಳು ಅವೈಜ್ಞಾನಿಕವೂ, ಸಮಾಜ ಮತ್ತು ಇತಿಹಾಸದ ಬಗ್ಗೆ ತಪ್ಪಾದ ನಿರೂಪಣೆಗಳೂ ಆಗಿವೆ ಎಂದು ಶಿಕ್ಷಣ, ಇತಿಹಾಸ ಮತ್ತು ಮಾನವಿಕ ಶಾಸ್ತ್ರಗಳ ವಿದ್ವಾಂಸರು ರಾಜ್ಯದ ಎಲ್ಲೆಡೆ ಪ್ರತಿರೋಧ ತೋರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಚಕ್ರತೀರ್ಥ ಸಮಿತಿಯು ಮಾಡಿರುವ ಪರಿಷ್ಕರಣೆಯನ್ನು ಕೈಬಿಡಬೇಕೆಂದೂ, ತಜ್ಞರು ಇಲ್ಲದ ಸಮಿತಿಯೊಂದನ್ನು ರಚಿಸಿ ಅದರ ಅಪ್ರಬುದ್ಧ ಪರಿಷ್ಕರಣೆಗಳನ್ನು ಜಾರಿಗೊಳಿಸಿ ಶೈಕ್ಷಣಿಕ ಬಿಕ್ಕಟ್ಟಿಗೆ ಕಾರಣರಾದ ಶಿಕ್ಷಣಸಚಿವ ಬಿ.ಸಿ. ನಾಗೇಶ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಚ್ಚೆತ್ತ ಸಾರ್ವಜನಿಕರು ಚಳವಳಿ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಚಿಂತನಗಂಗಾ’ ಹೆಸರಿನ ಗುಂಪೊಂದು ರೋಹಿತ್ ಚಕ್ರತೀರ್ಥರನ್ನು ಮಂಗಳೂರಿನಲ್ಲಿ ಸನ್ಮಾನಿಸಿ ಅವರಿಂದ ಪ್ರಾಚೀನ ಭಾರತದ ಇತಿಹಾಸದ ಬಗ್ಗೆ ಉಪನ್ಯಾಸ ಏರ್ಪಡಿಸಿರುವುದು ಹಾಸ್ಯಾಸ್ಪದವಾಗಿದೆ. ಇತಿಹಾಸದ ಬಗ್ಗೆ ತಜ್ಞತೆಯನ್ನು ಅವರು ಯಾವುದೇ ಬರಹ/ಗ್ರಂಥಗಳ ಮೂಲಕ ಸಾಬೀತುಪಡಿಸಿಲ್ಲ. ಅಲ್ಲದೆ ಅವರಿಂದ ಮಾರ್ಗದರ್ಶನ ಪಡೆದು ಪರಿಷ್ಕರಣೆಗೊಂಡಿರುವ ಇತಿಹಾಸದ ಪಠ್ಯಗಳು ವಿದ್ವಾಂಸರಿಂದ ಗೇಲಿಗೊಳಗಾಗಿವೆ.ಇರಲಿ.ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಇಟ್ಟುಕೊಂಡರೆಂದೇ ತಿಳಿಯೋಣ. ಆದರೆ ಆ ಸಭೆಯಲ್ಲಿ ಭಾಗವಹಿಸುವ/ಅಧ್ಯಕ್ಷತೆ ವಹಿಸುವ ವಿದ್ವದ್ಜನರಿಗೆ ವಿವೇಕ ಇರಬೇಡವೇ?

ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾದ ಡಾ.ಯಡಪಡಿತ್ತಾಯರು ವಿದ್ವಾಂಸರೆಂಬ ನೆಲೆಯಲ್ಲಿ ಆ ಸ್ಥಾನಕ್ಕೆ ಆಯ್ಕೆ ಆದವರಲ್ಲವೇ? ರಾಜ್ಯದ ವಿದ್ವತ್ ವಲಯ ದಿಂದ ಛೀಮಾರಿಗೊಳಗಾದ ವ್ಯಕ್ತಿಯೊಬ್ಬರ ಸನ್ಮಾನದಲ್ಲಿ ಅವರು ಅಧ್ಯಕ್ಷತೆ ವಹಿಸುವುದು ಅವರ ಘನತೆಗೆ ತಕ್ಕುದೇ? ಅವರು ಯೋಚಿಸಬೇಕು.

ಈ ಹಿಂದೆಯೂ ಅವರು ಇಂಥದೇ ಅವಿವೇಕದ ಕೆಲಸ ಮಾಡಿದ್ದರು. ವಿದ್ಯಾರ್ಥಿ ಕೌನ್ಸಿಲ್‌ನ ಉದ್ಘಾಟನೆಗೆ ಕರಾವಳಿಯಲ್ಲಿ ಕೋಮುದ್ವೇಷದ ಬೆಳವಣಿಗೆಗೆ ಕಾರಣರಾ ಗಿರುವವರನ್ನು ವಿ.ವಿ.ಗೆ ಆಹ್ವಾನಿಸಿದ್ದರು. ಚುನಾಯಿತ ವಿದ್ಯಾರ್ಥಿಗಳೇ ಸೂಚಿಸಿದ್ದರೂ ಅವರಿಗೆ ತಿಳಿ ಹೇಳಿ ಅವರನ್ನು ಬಿಟ್ಟು ಬೇರೊಬ್ಬರನ್ನು ಆಹ್ವಾನಿಸುವಂತೆ ಮಾಡುವ ಅಧಿಕಾರದ ಸ್ಥಾನದಲ್ಲಿ ಅವರು ಇದ್ದರು.

ವಿದ್ವಾಂಸರು ತಮ್ಮ ಸ್ಥಾನಗೌರವಕ್ಕೆ ತಕ್ಕಂತೆ ನಡೆದುಕೊಂಡರೆ ಮಾತ್ರ ನಾಗರಿಕರಿಗೂ ನಾಡಿನ ಮಾನ ಕಾಪಾಡಲು ಧೈರ್ಯ, ಶಕ್ತಿ ಬರುತ್ತದೆ.

Writer - ವಾಸುದೇವ ಉಚ್ಚಿಲ

contributor

Editor - ವಾಸುದೇವ ಉಚ್ಚಿಲ

contributor

Similar News