ಗುವಾಹಟಿಯಲ್ಲಿ ಎಷ್ಟು ದಿನ ಅಡಗಿಕೊಳ್ಳುತ್ತೀರಿ: ಬಂಡಾಯ ಶಾಸಕರನ್ನು ಪ್ರಶ್ನಿಸಿದ ರಾವತ್

Update: 2022-06-26 04:35 GMT
Photo:PTI

ಮುಂಬೈ: ಶಿವಸೇನೆಯ ವಕ್ತಾರ ಸಂಜಯ್ ರಾವತ್ ಅವರು ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರ ವಿರುದ್ಧ ಇಂದು ಬೆಳಗ್ಗೆ ವಾಗ್ದಾಳಿ ನಡೆಸಿದರು.

ಶಿವಸೇನೆ ಸಲ್ಲಿಸಿರುವ  ಅನರ್ಹತೆ ಅರ್ಜಿಯ ಕುರಿತು 16 ಬಂಡಾಯ ಶಾಸಕರಿಗೆ ನೋಟಿಸ್ ನೀಡಿರುವ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರ ಚಿತ್ರವನ್ನು ಒಳಗೊಂಡಿರುವ ಟ್ವೀಟ್‌ನಲ್ಲಿ ರಾವತ್ ಅವರು "ಗುವಾಹಟಿಯಲ್ಲಿ ಎಷ್ಟು ದಿನ ಅಡಗಿಕೊಳ್ಳುತ್ತೀರಿ" ಎಂದು ಬಂಡಾಯ ಶಾಸಕರನ್ನು  ಪ್ರಶ್ನಿಸಿದ್ದಾರೆ.

ಶಿವಸೇನಾ ಪಕ್ಷದ ಸಚೇತಕ ಸುನೀಲ್ ಪ್ರಭು ಅವರು ಕರೆದಿದ್ದ ಸಭೆಗೆ ಹಾಜರಾಗದಿದ್ದಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು ಶಿವಸೇನೆಯ 16 ಬಂಡಾಯ  ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಜೂನ್ 27 ರ ಸೋಮವಾರದೊಳಗೆ ತಮ್ಮ ವಾದವನ್ನು ಮಂಡಿಸುವಂತೆ ಉಪಸಭಾಪತಿ ನರಹರಿ ಅವರು  ಶಿಂಧೆ ಬಣಕ್ಕೆ ಸೂಚಿಸಿದ್ದಾರೆ.

ಏಕನಾಥ ಶಿಂಧೆ ಬಣ  ಪ್ರಸ್ತುತ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದೆ. ಶಿಂಧೆ ಬಳಗ ಇನ್ನೂ ಎರಡು ದಿನಗಳ ಕಾಲ ಹೊಟೇಲ್ ನಲ್ಲಿಯೇ ತಂಗುವ ನಿರೀಕ್ಷೆಯಿದೆ.

ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಶುಕ್ರವಾರ ರಾತ್ರಿ ಗುಜರಾತ್‌ನಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸಾಧ್ಯತೆಯ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಬಂಡಾಯ ಶಾಸಕರು  ಮಾಡಿದ ದ್ರೋಹವನ್ನು ಮರೆಯುವುದಿಲ್ಲ ಎಂದು ಠಾಕ್ರೆ ತಂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News