ಗುಜರಾತ್:‌ ಬಿಜೆಪಿ ಸೇರುವಂತೆ ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಿದ ಕಾಲೇಜು ಪ್ರಿನ್ಸಿಪಾಲ್‌

Update: 2022-06-27 12:50 GMT

ಅಹಮದಾಬಾದ್: ಗುಜರಾತ್‌ನ ಭಾವ್‌ನಗರದ ಕಾಲೇಜು ಪ್ರಾಂಶುಪಾಲರೊಬ್ಬರು ಬಿಜೆಪಿಗೆ ಸೇರುವಂತೆ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷ ಕಾಂಗ್ರೆಸ್ ನೋಟಿಸ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ  ಒತ್ತಾಯಿಸಿದೆ. ವಿರೋಧ ಪಕ್ಷದ ನಾಯಕರು  ಸೋಮವಾರದಂದು ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಭಾವನಗರದಲ್ಲಿರುವ ಗಾಂಧಿ ಬಾಲಕಿಯರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರು ಬಿಜೆಪಿಯ ಪೇಜ್ ಕಮಿಟಿ ಸದಸ್ಯರಾಗಿ ನೋಂದಣಿ ಮಾಡುವಂತೆ ನೋಟಿಸ್ ನೀಡಿದ್ದಾರೆ.

“ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ, ಬಿಜೆಪಿಯಲ್ಲಿ ಪೇಜ್ ಕಮಿಟಿಯ ಸದಸ್ಯರಾಗಿ ನೋಂದಾಯಿಸಲು, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ತರಬೇಕು. ಭಾವನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಮಿತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಮಾತ್ರ ಸದಸ್ಯರಾಗಬಹುದು. ಅಲ್ಲದೆ, ಬಿಜೆಪಿ ಸದಸ್ಯತ್ವಕ್ಕೆ ಸೇರಲು ಪ್ರತಿಯೊಬ್ಬ ವಿದ್ಯಾರ್ಥಿಯು ಮೊಬೈಲ್ ಫೋನ್ ತರಬೇಕು. ಎಲ್ಲಾ ಹೆಣ್ಣುಮಕ್ಕಳು ಇದನ್ನು ಗಮನಿಸಬೇಕು." ಎಂದು ಪ್ರಾಂಶುಪಾಲರ ನೋಟಿಸಿನಲ್ಲಿ ಹೇಳಲಾಗಿದೆ ಎಂದು indiatoday.in ವರದಿ ಮಾಡಿದೆ. 

ಕಾಲೇಜು ಪ್ರಾಂಶುಪಾಲರು ನೀಡಿರುವ ನೋಟಿಸ್‌ಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಘಟನೆಯ ಕುರಿತು ಕಾಲೇಜು ಇನ್ನೂ ಪ್ರತಿಕ್ರಿಯಿಸಿಲ್ಲ. ಕಾಲೇಜಿನಿಂದ ಇಂದು ಅಧಿಕೃತ ಹೇಳಿಕೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News