ಜಿಎಸ್ಟಿ ಪರಿಷ್ಕರಣೆ: ಈ ಸರಕುಗಳು, ಸೇವೆಗಳು ಇನ್ನು ಮುಂದೆ ದುಬಾರಿಯಾಗಲಿವೆ

Update: 2022-06-30 14:55 GMT

ಹೊಸದಿಲ್ಲಿ,ಜೂ.30: ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಮಂಡಳಿಯು ಇನ್ನಷ್ಟು ಸರಕುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರೊಂದಿಗೆ ಕೆಲವು ಉತ್ಪನ್ನಗಳು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳನ್ನು ಹೆಚ್ಚಿಸಲು ನಿರ್ಧರಿಸಿರುವುದು ಈಗಾಗಲೇ ಅಧಿಕ ಹಣದುಬ್ಬರದ ಹೊಡೆತದಿಂದ ನಲುಗಿರುವ ಶ್ರೀಸಾಮಾನ್ಯನನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಿಸುವ ಸಾಧ್ಯತೆಗಳಿವೆ. ಜುಲೈ 18ರಿಂದ ಬ್ಯಾಂಕ್‌ಗಳು ವಿತರಿಸುವ ಚೆಕ್ಕು (ಬಿಡಿ ಹಾಳೆ ಮತ್ತು ಪುಸ್ತಕ)ಗಳಿಗೆ ವಿಧಿಸುವ ಶುಲ್ಕಕ್ಕೆ ಶೇ.18 ಹಾಗೂ ಅಟ್ಲಾಸ್‌ಗಳು ಸೇರಿದಂತೆ ನಕಾಶೆಗಳು ಮತ್ತು ಚಾರ್ಟ್‌ಗಳಿಗೆ ಶೇ.12ರಷ್ಟು ಜಿಎಸ್‌ಟಿ ದರಗಳು ಅನ್ವಯವಾಗಲಿವೆ. ಬ್ರಾಂಡ್ ಹೊಂದಿರದ, ಆದರೆ ಮೊದಲೇ ಪ್ಯಾಕ್ ಮಾಡಲಾಗಿರುವ ಮೊಸರು,ಲಸ್ಸಿ,ಮಜ್ಜಿಗೆ,ಆಹಾರ ಸಾಮಗ್ರಿಗಳು,ಧಾನ್ಯಗಳು ಇತ್ಯಾದಿಗಳು ವಿನಾಯಿತಿ ಪಟ್ಟಿಯಿಂದ ಜಿಎಸ್‌ಟಿ ವ್ಯಾಪ್ತಿಗೆ ಸೇರಲಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಚಂಡಿಗಡದಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಲಿಯ ಎರಡು ದಿನಗಳ 47ನೇ ಸಭೆಯಲ್ಲಿ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇನ್ನೊಂದೆಡೆ,ಒಸ್ಟೊಮಿ ಮತ್ತು ಆರ್ಥೊಪೆಡಿಕ್ ಸಾಧನಗಳು, ಶಾರೀರಿಕ ದೋಷ ಅಥವಾ ಅಂಗವೈಕಲ್ಯವನ್ನು ಸರಿಪಡಿಸಲು ಧರಿಸಲಾಗುವ ಅಥವಾ ಶರೀರದಲ್ಲಿ ಅಳವಡಿಸಲಾಗುವ ಸ್ಪ್ಲಿಂಟ್‌ಗಳು ಮತ್ತು ಇತರ ಮೂಳೆಮುರಿತ ಉಪಕರಣಗಳು,ಶರೀರದ ಕೃತಕ ಭಾಗಗಳಂತಹ ವೈದ್ಯಕೀಯ ಸಾಧನಗಳು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ವೇಳೆ ಅಳವಡಿಸಲಾಗುವ ಲೆನ್ಸ್‌ಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ.

ರೋಪ್‌ವೇ ಮೂಲಕ ಸರಕುಗಳು ಮತ್ತು ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.5ಕ್ಕೆ ಮತ್ತು ಇಂಧನ ವೆಚ್ಚ ಸೇರಿದ ಟ್ರಕ್/ಗೂಡ್ಸ್ ಕ್ಯಾರಿಯೇಜ್‌ಗಳ ಬಾಡಿಗೆಯ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.6ಕ್ಕೆ ತಗ್ಗಿಸಲಾಗಿದೆ.

ಬರೆಯುವ,ಮುದ್ರಣ ಮತ್ತು ಡ್ರಾಯಿಂಗ್ ಶಾಯಿಗಳು,ಚೂರಿಗಳು ಮತ್ತು ಕಟಿಂಗ್ ಬ್ಲೇಡ್‌ಗಳು,ಪೇಪರ್ ಚಾಕುಗಳು,ಪೆನ್ಸಿಲ್ ಶಾರ್ಪನರ್‌ಗಳು ಮತ್ತು ಬ್ಲೇಡ್‌ಗಳು,ಚಮಚ ಮತ್ತು ಮುಳ್ಳುಚಮಚಗಳು,ಸ್ಕಿಮರ್‌ಗಳು,ವಿದ್ಯುತ್ ಚಾಲಿತ ಪಂಪ್‌ಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.

ಬೀಜಗಳು ಮತ್ತು ಧಾನ್ಯದ ಕಾಳುಗಳನ್ನು ಸ್ವಚ್ಚಗೊಳಿಸಲು,ವಿಂಗಡಿಸಲು ಅಥವಾ ಶ್ರೇಣೀಕರಿಸಲು ಬಳಕೆಯಾಗುವ ಯಂತ್ರಗಳು,ಮಿಲ್ಲಿಂಗ್ ಉದ್ಯಮದಲ್ಲಿ ಬಳಕೆಯಾಗುವ ಯಂತ್ರಗಳು,ಗಾಳಿ ಆಧಾರಿತ ಹಿಟ್ಟಿನ ಯಂತ್ರಗಳು ಹಾಗೂ ವೆಟ್ ಗ್ರೈಂಡರ್‌ಗಳ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.

ಮೊಟ್ಟೆಗಳು,ತರಕಾರಿಗಳು ಅಥವಾ ಇತರ ಕೃಷಿ ಉತ್ಪನ್ನಗಳನ್ನು ಸ್ವಚ್ಚಗೊಳಿಸಲು,ವಿಂಗಡಿಸಲು ಅಥವಾ ಶ್ರೇಣೀಕರಿಸಲು ಬಳಕೆಯಾಗುವ ಯಂತ್ರಗಳು ಮತ್ತು ಅವುಗಳ ಬಿಡಿಭಾಗಗಳು,ಹಾಲು ಕರೆಯುವ ಯಂತ್ರ ಮತ್ತು ಹೈನುಗಾರಿಕೆ ಯಂತ್ರೋಪಕರಣಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.18ಕ್ಕೆ ಏರಿಸಲಾಗಿದೆ.

ಎಲ್‌ಇಡಿ ದೀಪಗಳು,ಲೈಟ್ಸ್ ಮತ್ತು ಫಿಕ್ಸ್ಚರಗಳು,ಅವುಗಳ ಲೋಹದ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳು,ಡ್ರಾಯಿಂಗ್ ಮತ್ತು ಮಾರ್ಕಿಂಗ್ ಉಪಕರಣಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.18ಕ್ಕೆ ಹಾಗೂ ಸೋಲಾರ್ ವಾಟರ್ ಹೀಟರ್ ಮತ್ತು ಸಿಸ್ಟಮ್‌ಗಳು,ಸಿದ್ಧ ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.12ಕ್ಕೆ ಹೆಚ್ಚಿಸಲಾಗಿದೆ.

ಸೇವೆಗಳಿಗೆ ಸಂಬಂಧಿಸಿದಂತೆ ಚಿಟ್ ಫಂಡ್ ನಿರ್ವಾಹಕ ಸಲ್ಲಿಸುವ ಸೇವೆ,ಚರ್ಮ ಮತ್ತು ತೊಗಲು,ಚರ್ಮದ ವಸ್ತುಗಳು ಮತ್ತು ಪಾದರಕ್ಷೆಗಳು ಮತ್ತು ಆವೆಮಣ್ಣಿನ ಇಟ್ಟಿಗೆ ತಯಾರಿಕೆಗೆ ಸಂಬಂಧಿಸಿದ ಜಾಬ್ ವರ್ಕ್‌ಗಳು ಹಾಗೂ ರಸ್ತೆಗಳು, ಸೇತುವೆಗಳು,ರೈಲ್ವೆ,ಮೆಟ್ರೋ,ತ್ಯಾಜ್ಯದ್ರವಗಳ ಸಂಸ್ಕರಣೆಯ ಗುತ್ತಿಗೆಗಳು,ಚಿತಾಗಾರಗಳ ಸೇವೆಯ ಮೇಲಿನ ತೆರಿಗೆ ದರಗಳನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ.

ಇಲೆಕ್ಟ್ರಾನಿಕ್ ತ್ಯಾಜ್ಯಗಳು,ಪೆಟ್ರೋಲಿಯಂ ಮತ್ತು ಕೋಲ್ ಬೆಡ್ ಮಿಥೇನ್ ಮೇಲಿನ ರಿಯಾಯಿತಿ ದರಗಳನ್ನೂ ಸಹ ಹೆಚ್ಚಿಸಲಾಗಿದೆ.

ಈಶಾನ್ಯ ರಾಜ್ಯಗಳು ಮತ್ತು ಬಾಗ್ಡೋಗ್ರಾದಿಂದ ಅಥವಾ ಅಲ್ಲಿಗೆ ವಿಮಾನ ಪ್ರಯಾಣದ ಮೇಲಿನ ತೆರಿಗೆ ವಿನಾಯಿತಿಯನ್ನು ಇಕಾನಮಿ ಕ್ಲಾಸ್‌ಗೆ ಸೀಮಿತಗೊಳಿಸಲಾಗಿದೆ.

ದಿನಕ್ಕೆ 1,000ರೂ.ಗಿಂತ ಕಡಿಮೆ ಬಾಡಿಗೆಯ ಹೋಟೆಲ್ ಕೋಣೆಗಳಿಗೆ ಶೇ.12ರಷ್ಟು ತೆರಿಗೆಯನ್ನು ವಿಧಿಸಲಾಗುವುದು. ಈವರೆಗೆ ಇವುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಇತ್ತು.

ಆಸ್ಪತ್ರೆಗಳು ರೋಗಿಗಳಿಗೆ ದಿನವೊಂದಕ್ಕೆ ವಿಧಿಸುವ ಕೊಠಡಿ ಬಾಡಿಗೆ 5,000 ರೂ.ಮೀರಿದರೆ (ಐಸಿಯು ಹೊರತಪಡಿಸಿ) ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆ ಶೇ.5ರಷ್ಟು ತೆರಿಗೆ ಅನ್ವಯವಾಗಲಿದೆ.

ಕಲೆ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಮನೋರಂಜನೆ ಚಟುವಟಿಕೆಗಳಲ್ಲಿ ತರಬೇತಿ ಕೇಂದ್ರಗಳಿಗೆ ತೆರಿಗೆ ವಿನಾಯಿತಿಯನ್ನು ಓರ್ವ ವ್ಯಕ್ತಿಯು ಒದಗಿಸುವ ಇಂತಹ ಸೇವೆಗಳಿಗೆ ಸೀಮಿತಗೊಳಿಸಲಾಗಿದೆ.

ರೈಲು ಮತ್ತು ಹಡಗಿನ ಮೂಲಕ ರೈಲ್ವೆ ಉಪಕರಣಗಳು ಮತ್ತು ಸಾಮಗ್ರಿಗಳ ಸಾಗಾಣಿಕೆ,ತೆರಿಗೆಯನ್ನು ಆಕರ್ಷಿಸುವ ಸರಕುಗಳ ಗೋದಾಮು ಸೌಲಭ್ಯ,ಕೃಷಿ ಉತ್ಪನ್ನಗಳ ಗೋದಾಮುಗಳಲ್ಲಿ ಫ್ಯೂಮಿಗೇಷನ್,ಆರ್‌ಬಿಐ,ಐಆರ್‌ಡಿಎ,ಸೆಬಿ,ಎಫ್‌ಎಸ್‌ಎಸ್‌ಎಐ, ಜಿಎಸ್‌ಟಿಎನ್‌ಗಳು ಒದಗಿಸುವ ಸೇವೆಗಳು,ಉದ್ಯಮ ಸಂಸ್ಥೆಗಳಿಗೆ ಬಾಡಿಗೆಗೆ ವಸತಿ ಕಟ್ಟಡಗಳ ಒದಗಣೆ ಹಾಗೂ ಆಕರ ಕೋಶಗಳ ಸಂರಕ್ಷಣೆಯ ಮೂಲಕ ಕಾರ್ಡ್ ಬ್ಲಡ್ ಬ್ಯಾಂಕ್‌ಗಳು ಒದಗಿಸುವ ಸೇವೆಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯನ್ನು ಹಿಂದೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News