ಖಂಡನಾರ್ಹ, ವಿಷಾದನೀಯ, ಇಸ್ಲಾಂ-ವಿರೋಧಿ ಕೃತ್ಯ: ಉದಯಪುರ್ ಹತ್ಯೆ ಕುರಿತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Update: 2022-06-29 11:24 GMT

ಲಕ್ನೋ: ಉದಯಪುರ್ ನಲ್ಲಿ ಟೈಲರ್ ಒಬ್ಬರ ಬರ್ಬರ ಹತ್ಯೆಯನ್ನು ಖಂಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ "ಕಾನೂನು ಕೈಗೆತ್ತಿಕೊಳ್ಳುವುದು ತೀರಾ ಖಂಡನಾರ್ಹ, ವಿಷಾದನೀಯ ಮತ್ತು ಇಸ್ಲಾಂ-ವಿರೋಧಿ ಆಗಿದೆ,'' ಎಂದು ಹೇಳಿದೆ.

"ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಅವಮಾನಿಸಿ ನಿಂದಿಸುವುದು ಗಂಭೀರ ಅಪರಾಧ. ಪ್ರವಾದಿ ಮುಹಮ್ಮದ್ ಕುರಿತಂತೆ ಬಿಜೆಪಿ(ಮಾಜಿ) ವಕ್ತಾರೆ ನೂಪುರ್ ಶರ್ಮ ಆಡಿರುವ ನಿಂದನಾತ್ಮಕ ಮಾತುಗಳು ಮುಸ್ಲಿಂ ಸಮುದಾಯಕ್ಕೆ ತುಂಬಾ ನೋವು ತಂದಿದೆ. ಈ ಅಪರಾಧದ ವಿರುದ್ಧ ಸರಕಾರ ಕ್ರಮಕೈಗೊಳ್ಳದೇ ಇರುವುದು ಗಾಯಕ್ಕೆ ಉಪ್ಪು ಸವರಿದಂತೆ. ಹಾಗಿದ್ದರೂ ಸಹ, ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಹಾಗೂ ಇನ್ನೊಬ್ಬರನ್ನು ಅಪರಾಧಿ ಎಂದು ಘೋಷಿಸಿಕೊಂಡು ಅವರನ್ನು ಹತ್ಯೆಗೈಯ್ಯುವುದು ತೀರಾ ಖಂಡನಾರ್ಹ ಕೃತ್ಯ,'' ಎಂದು ಮಾಧ್ಯಮ ಹೇಳಿಕೆಯಲ್ಲಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹಝ್ರತ್ ಮೌಲಾನ ಖಾಲಿದ್ ಸೈಫುಲ್ಲಾ ರಹ್ಮನಿ ಹೇಳಿದ್ದಾರೆ.

"ಕಾನೂನು ಅಥವಾ ಇಸ್ಲಾಮಿಕ್ ಶರಿಯಾ ಇಂತಹ ಕೃತ್ಯಕ್ಕೆ ಸಮ್ಮತಿಸುವುದಿಲ್ಲ. ಉದಯಪುರ್ ನಲ್ಲಿ ನಡೆದ ಬರ್ಬರ ಹತ್ಯೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬಲವಾಗಿ ಖಂಡಿಸುತ್ತದೆ,'' ಎಂದು ಹೇಳಿಕೆ ತಿಳಿಸಿದೆ.

ಮುಸ್ಲಿಂ ಸಮುದಾಯ ತಾಳ್ಮೆಯಿಂದ ವರ್ತಿಸಬೇಕು ಹಾಗೂ ಕಾನೂನು ಕೈಗೆತ್ತಿಕೊಳ್ಳದೆ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಕೃತ್ಯದಲ್ಲಿ ತೊಡಗಬಾರದು, ತಾಳ್ಮೆಯಿಂದಿದ್ದುಕೊಂಡು  ಕಾನೂನು ಮಾರ್ಗಗಳ ಮೂಲಕ ಹೋರಾಡಬೇಕು. ಈ ವಿಚಾರ ಮುಸ್ಲಿಮರಿಗೂ ಭಾವನಾತ್ಮಕವಾಗಿರುವುದರಿಂದ ಎಲ್ಲಾ ಧರ್ಮಗಳ ಧಾರ್ಮಿಕ ವ್ಯಕ್ತಿಗಳನ್ನು ನಿಂದಿಸುವುದನ್ನು ತಡೆಯುವ ಕಾನೂನನ್ನು ಸರಕಾರ ಜಾರಿಗೊಳಿಸಬೇಕು,'' ಎಂದು ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News