ಆಟೋರಿಕ್ಷಾ ಚಾಲಕನಾಗಿದ್ದ ಏಕನಾಥ್ ಶಿಂದೆ ಈಗ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ

Update: 2022-06-30 18:30 GMT
Photo: PTI

ಮುಂಬೈ,ಜೂ.30: ಅದೃಷ್ಟ ಯಾವಾಗ ಯಾರಿಗೆ ಖುಲಾಯಿಸುತ್ತದೆ ಎನ್ನುವುದನ್ನು ಬಲ್ಲವರು ಯಾರೂ ಇಲ್ಲ. ಒಂದು ಕಾಲದಲ್ಲಿ ಆಟೋರಿಕ್ಷಾ ಚಾಲಕನಾಗಿದ್ದ ಬಂಡುಕೋರ ಶಿವಸೇನೆ ಶಾಸಕರ ಬಣದ ನಾಯಕ ಏಕನಾಥ ಶಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಉದ್ಧವ ಠಾಕ್ರೆಯವರನ್ನು ಪದಚ್ಯುತಗೊಳಿಸಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿಂದೆ ಅವರಿಗೆ ಅದೃಷ್ಟ ಲಕ್ಷಿ ಯಾವ ರೀತಿಯಲ್ಲಿ ಒಲಿದಿದ್ದಾಳೆಂದರೆ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರವನ್ನು ಐದು ವರ್ಷಗಳ ಕಾಲ ಆಳಿದ್ದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಇಂದು ಅವರ ಕೈಕೆಳಗೆ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಯಾರು ಈ ಶಿಂದೆ?

 ಮಹಾರಾಷ್ಟ್ರದಲ್ಲಿ ಬೃಹತ್ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸುವವರೆಗೆ ಏಕನಾಥ ಸಂಭಾಜಿ ಶಿಂದೆ ಅವರು ರಾಜ್ಯ ಸರಕಾರದಲ್ಲಿ ಸಂಪುಟ ದರ್ಜೆ ಸಚಿವ (ಪಿಡಬ್ಲ್ಯುಡಿ,ಎಂಎಸ್‌ಆರ್‌ಡಿಸಿ ಮತ್ತು ಪಿಎಸ್‌ಯು) ರಾಗಿದ್ದರು. ಶಿವಸೇನೆ ಸದಸ್ಯರಾಗಿ ಕೋಪ್ರಿ-ಪಚಪಾಖಡಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. 58 ವರ್ಷ ಪ್ರಾಯದ ಶಿಂದೆ 2004,2009,2014 ಮತ್ತು 2019ರಲ್ಲಿ...ಹೀಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಆರಂಭದ ಜೀವನ

1964,ಫೆ.9ರಂದು ಸತಾರಾದಲ್ಲಿ ಜನಿಸಿದ್ದ ಶಿಂದೆ ಎಳವೆಯಲ್ಲೇ ಥಾಣೆಗೆ ತೆರಳಿ ಅಲ್ಲಿಯ ಮಂಗಳಾ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನಲ್ಲಿ 11ನೇ ತರಗತಿವರೆಗೆ ಶಿಕ್ಷಣವನ್ನು ಪೂರೈಸಿದ್ದರು. ಬಳಿಕ ಕುಟುಂಬದ ಪೋಷಣೆಗಾಗಿ ಓದಿಗೆ ತಿಲಾಂಜಲಿ ನೀಡಿ ದುಡಿಮೆಯನ್ನು ಆರಂಭಿಸಿದ್ದರು.

  1980ರಲ್ಲಿ ಶಿಂದೆ ಶಿವಸೇನೆ ವರಿಷ್ಠ ಬಾಳಾಸಾಹೇಬ್ ಠಾಕ್ರೆಯವರಿಂದ ಪ್ರಭಾವಿತರಾಗಿ ಶಿವಸೈನಿಕನಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆ ಅವಧಿಯಲ್ಲಿ ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಳ್ಳಾರಿಯಲ್ಲಿ 40 ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು.

 ಒಂದು ಕಾಲದಲ್ಲಿ ಥಾಣೆಯಲ್ಲಿ ಆಟೋರಿಕ್ಷಾ ಚಾಲಕನಾಗಿದ್ದ ಶಿಂದೆ ರಾಜಕೀಯವನ್ನು ಸೇರಿದ ಬಳಿಕ ಬಹುಬೇಗನೆ ಥಾಣೆ-ಪಾಲ್ಘರ್ ಪ್ರದೇಶದಲ್ಲಿ ಪ್ರಮುಖ ಶಿವಸೇನೆ ನಾಯಕನಾಗಿ ಹೊರಹೊಮ್ಮಿದ್ದರು. ಸಾರ್ವಜನಿಕ ಹಿತಾಸಕ್ತಿ ವಿಷಯಗಳಲ್ಲಿ ತನ್ನ ಆಕ್ರಮಣಕಾರಿ ಧೋರಣೆಗೆ ಅವರು ಹೆಸರಾಗಿದ್ದಾರೆ.

ರಾಜಕೀಯ ವೃತ್ತಿಜೀವನ

ಶಿವಸೇನೆಯ ಧ್ಯೇಯಕ್ಕಾಗಿ ಅವರು ತನ್ನನ್ನು ಸಮರ್ಪಿಸಿಕೊಂಡಿದ್ದನ್ನು ಗುರುತಿಸಿದ್ದ ಪಕ್ಷವು 1997ರಲ್ಲಿ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ) ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು ಮತ್ತು ಸಾಕಷ್ಟು ಬಹುಮತದಿಂದ ಗೆದ್ದು ಕಾರ್ಪೊರೇಟರ್ ಆಗಿದ್ದರು.

2001ರಲ್ಲಿ ಟಿಎಂಸಿಯಲ್ಲಿ ಸದನ ನಾಯಕನಾಗಿ ಆಯ್ಕೆಯಾಗಿದ್ದ ಅವರು 2004ರವರೆಗೆ ಆ ಹುದ್ದೆಯಲ್ಲಿ ಮುಂದುವರಿದಿದ್ದರು. ಆ ಅವಧಿಯಲ್ಲಿ ಅವರು ತನ್ನನ್ನು ಟಿಎಂಸಿ ಅಥವಾ ನಗರಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿರಲಿಲ್ಲ,ಇಡೀ ಥಾಣೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸಕ್ರಿಯ ಆಸಕ್ತಿಯನ್ನು ಹೊಂದಿದ್ದರು.

2004ರಲ್ಲಿ ಥಾಣೆ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಅವರು ಮರುವರ್ಷವೇ ಪ್ರತಿಷ್ಠಿತ ಶಿವಸೇನೆ ಥಾಣೆ ಜಿಲ್ಲಾಧ್ಯಕ್ಷ ಹುದ್ದೆಗೆ ನೇಮಕಗೊಂಡಿದ್ದರು. ನಂತರದ 2009,2014 ಮತ್ತು 2019ರ ವಿಧಾನಸಭಾ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸಿದ್ದರು.

2014ರ ಚುನಾವಣೆಗಳ ಬಳಿಕ ಶಿವಸೇನೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ಶಿಂದೆ ಬಳಿಕ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದರು. ಒಂದು ತಿಂಗಳಲ್ಲೇ ಶಿವಸೇನೆಯು ರಾಜ್ಯ ಸರಕಾರವನ್ನು ಸೇರಲು ನಿರ್ಧರಿಸಿತ್ತು ಮತ್ತು ಶಿಂದೆ ಪಿಡಬ್ಲುಡಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2019,ಜನವರಿಯಲ್ಲಿ ಅವರು ಪಿಡಬ್ಲುಡಿ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಹೊಣೆಯನ್ನು ವಹಿಸಿಕೊಂಡಿದ್ದರು.

ಕುಟುಂಬ

ಶಿಂದೆ ಮತ್ತು ಲತಾ ಶಿಂದೆ ದಂಪತಿಯ ಪುತ್ರ ಡಾ.ಶ್ರೀಕಾಂತ ಶಿಂದೆ ಅವರು ಆರ್ಥೊಪಿಡಿಕ್ ಸರ್ಜನ್ ಆಗಿದ್ದಾರೆ. ಕಲ್ಯಾಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು ಶಿವಸೇನೆಯಿಂದ ಪಕ್ಷಾಂತರಗೊಂಡಿದ್ದ ಎನ್‌ಸಿಪಿ ಅಭ್ಯರ್ಥಿ ಆನಂದ ಪರಾಂಜಪೆ ಮತ್ತು ಎಂಎನ್‌ಎಸ್‌ನ ರಾಜು ಪಾಟೀಲ್ ಅವರನ್ನು ಪರಾಭವಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News