ಜಾಗತಿಕ ರಾಜಕೀಯ ಹಿಂದೂ ಮಹಾ ಸಾಗರದಲ್ಲಿ ಅಂತರರಾಷ್ಟ್ರೀಯ ವೈರತ್ವ, ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ:ಅಜಿತ್ ದೋವಲ್

Update: 2022-06-30 18:37 GMT

ಹೊಸದಿಲ್ಲಿ, ಜೂ. 30: ಹಿಂದೂ ಮಹಾಸಾಗರ ವಲಯ (ಐಒಆರ್)ದಲ್ಲಿ ಅಂತರರಾಷ್ಟ್ರೀಯ ವೈರತ್ವ, ಪೈಪೋಟಿ ಹಾಗೂ ಹಿತಾಸಕ್ತಿಯ ಸಂಘರ್ಷ ಹೆಚ್ಚುತ್ತಿದೆ. ಆದುದರಿಂದ ನಾವು ಈ ಪ್ರದೇಶವನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗುರುವಾರ ಹೇಳಿದ್ದಾರೆ.

‘‘ಈ ಹಿಂದೆ ಇದು ಶಾಂತಿಯ ಸಾಗರವಾಗಿತ್ತು. ಆದರೆ, ಈಗ ಹಿಂದೂ ಮಹಾ ಸಾಗರ ವಲಯ (ಐಒಆರ್)ದಲ್ಲಿ ಜಾಗತಿಕ ರಾಜಕೀಯ ಬದಲಾಗುತ್ತಿದೆ’’ ಎಂದು ದೋವಲ್ ತಿಳಿಸಿದ್ದಾರೆ.

ಸಾಗರ ತೀರದ ಭದ್ರತೆ ಮೇಲೆ ಪರಿಣಾಮ ಬೀರುವ ವಿಷಯಗಳ ಪ್ರಮುಖ ನೀತಿ ಕುರಿತು ಚರ್ಚೆ ನಡೆಸಲು ಸಾಗರ ತೀರದ ಭದ್ರತಾ ಗುಂಪು  (ಎಂಎಎಂಎಸ್‌ಜಿ) ಆಯೋಜಿಸಿದ ಮೊಟ್ಟ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.

ಇದು ಪ್ರಮುಖ ಕೇಂದ್ರ ಸಚಿವಾಲಯಗಳು, ಸಂಸ್ಥೆಗಳು, ಸಾಗರ ತೀರದ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಭದ್ರತಾ ಪಡೆಗಳು ಹಾಗೂ 13 ಕರಾವಳಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ರಾಜ್ಯ ಸಾಗರ ತೀರ ಭದ್ರತಾ ಸಮನ್ವಯಕಾರರನ್ನು ಸದಸ್ಯರನ್ನಾಗಿ ಹೊಂದಿದೆ.

ಈ ಸಭೆಯಲ್ಲಿ ದೇಶದ ಮೊದಲ ಎನ್‌ಎಂಎಸ್‌ಸಿಯಾಗಿ ಫೆಬ್ರವರಿ 16ರಂದು ಅಧಿಕಾರ ವಹಿಸಿಕೊಂಡ ರಾಷ್ಟ್ರೀಯ ಸಾಗರ ತೀರ ಭದ್ರತಾ ಸಮನ್ವಯಕಾರ ವೈಸ್ ಅಡ್ಮಿರಲ್ ಜಿ. ಅಶೋಕ್ ಕುಮಾರ್ (ನಿವೃತ್ತ) ಅಧ್ಯಕ್ಷತೆ ವಹಿಸಿದ್ದರು. ನೌಕಾ ಪಡೆ ವರಿಷ್ಠ ಆರ್. ಹರಿ ಕುಮಾರ್ ಹಾಗೂ ಎನ್‌ಎಸ್‌ಸಿಎಸ್‌ನ ಉಪ ಎನ್‌ಎಸ್‌ಎಗಳು ಕೂಡ ಉಪಸ್ಥಿತರಿದ್ದರು.

ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ದೋವಲ್, ಹಿಂದೂ ಮಹಾ ಸಾಗರ ಭಾರತದ ಅತಿ ದೊಡ್ಡ ಆಸ್ತಿ, ಆದರೆ, ಅದರ ಸಮಸ್ಯೆಗಳು ಆ ಆಸ್ತಿಯ ಮೌಲ್ಯವನ್ನು ಕುಗ್ಗಿಸಬಹುದು ಎಂದರು.

ನಾವು ಸೊತ್ತುಗಳನ್ನು ಸೃಷ್ಟಿಸುತ್ತೇವೆ ಹಾಗೂ ಅಭಿವೃದ್ಧಿಪಡಿಸುತ್ತೇವೆ. ಇದರಿಂದ ವ್ಯಾಪಾರ ಹಾಗೂ ವಾಣಿಜ್ಯ ಹೆಚ್ಚಾಗುತ್ತದೆ. ಆದರೆ, ಇದು ಸಾಗರ ತೀರದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ ಹಾಗೂ ಸಾಗರ ತೀರದ ಭದ್ರತೆಗೆ ಸವಾಲನ್ನು ಒಡ್ಡುತ್ತದೆ ಎಂದು ಅವರು ಹೇಳಿದರು.

ಇದರೊಂದಿಗೆ ಈ ಹಿಂದಿನ ಸಮಸ್ಯೆಗಳು ಮುಂದುವರಿಯುತ್ತವೆ ಎಂದು ಹೇಳಿದ ಅವರು, ಕಡಲ್ಗಳ್ಳರು, ಮಾದಕ ವಸ್ತು ಸಾಗಾಟ, ಮಾನವ ಸಾಗಾಟದಂತದ ವಿಷಯಗಳು ಸಾಂಪ್ರದಾಯಿಕ ಭದ್ರತೆಗೆ ನಿರಂತರ ಸವಾಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News