"ದೇಶ ಪತನ" ಇಂದಿನ ಅತಿದೊಡ್ಡ ಸಮಸ್ಯೆ: ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್

Update: 2022-07-01 02:30 GMT

ಕೊಲ್ಕತ್ತ: "ದೇಶದ ಪತನ" ಭಾರತ ಇಂದು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಿಶ್ಲೇಷಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಇಲ್ಲಿನ ಸಾಲ್ಟ್ ಲೇಕ್ ಪ್ರದೇಶದಲ್ಲಿ ಅಮರ್ತ್ಯ‌ ಸೇನ್ ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಕಂಡುಬರುತ್ತಿರುವ ವಿಭಜನೆ ಅತ್ಯಂತ ಆತಂಕಕಾರಿ ಅಂಶ. ಗುಜರಾತ್ ಪೊಲೀಸರು ತೀಸ್ತಾ ಸೆಟಲ್‌ವಾಡ್ ಅವರನ್ನು ಬಂಧಿಸಿರುವ ಕ್ರಮವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೇ ಜನರನ್ನು ಜೈಲಿಗೆ ಅಟ್ಟಲು ಸಾಮ್ರಾಜ್ಯಶಾಹಿ ಕಾನೂನುಗಳನ್ನು ಬಳಸುತ್ತಿರುವ ವಿಶೇಷ ಪರಿಸ್ಥಿತಿ ಇದೆ ಎಂದು ಹೇಳಿದರು.

ಇವೆಲ್ಲವನ್ನೂ ಎದುರಿಸಲು ಕೇವಲ ಸಹಿಷ್ಣುತೆಯಷ್ಟೇ ಸಾಲದು. "ಭಾರತ ಅಂತರ್ಗತವಾಗಿಯೇ ಸಹಿಷ್ಣುತೆ ಸಂಸ್ಕೃತಿಯನ್ನು ಹೊಂದಿದೆ. ಆದರೆ ಹಿಂದೂಗಳು ಮತ್ತು ಮುಸ್ಲಿಮರು ಜತೆಯಾಗಿ ಕಾರ್ಯನಿರ್ವಹಿಸಬೇಕಾದ್ದು ಇಂದಿನ ಅಗತ್ಯ. ಬಹುಮತ ಎಲ್ಲದರ ಕೊನೆಯಲ್ಲ" ಎಂದರು.

ಭಾರತ ಕೇವಲ ಹಿಂದೂ ಸಂಸ್ಕೃತಿಯನ್ನು ಪ್ರತಿನಿಧಿಸುವ ದೇಶವಲ್ಲ. ಮುಸ್ಲಿಂ ಸಂಸ್ಕೃತಿ ಕೂಡಾ ಭಾರತದ ವೈಭವೋಪೇತ ಇತಿಹಾಸದ ಭಾಗ. "ಹಿಂದುಗಳು ಒಟ್ಟಾಗಿ ತಾಜ್‍ಮಹಲ್ ನಿರ್ಮಾಣದ ಕೀರ್ತಿಯನ್ನು ಪಡೆಯಲು ಸಾಧ್ಯ ಎಂದು ನನಗೆ ಅನಿಸುವುದಿಲ್ಲ. ಶಹಾಜಹಾನ್‍ನ ಹಿರಿಯ ಪುತ್ರ ದಾರಾ ಶಿಕೋಹ್, 50 ಉಪನಿಷತ್‍ಗಳನ್ನು ಸಂಸ್ಕೃತದಿಂದ ಪರ್ಶಿಯಾಗೆ ಭಾಷಾಂತರಿಸಿದ್ದಾನೆ. ಇದು ಹಿಂದೂ ಶಾಸನಗಳ ಬಗ್ಗೆ, ಹಿಂದೂ ಸಂಸ್ಕೃತಿ ಬಗ್ಗೆ ಮತ್ತು ಹಿಂದೂ ಸಂಪ್ರದಾಯಗಳ ಬಗ್ಗೆ ಇಡೀ ಜಗತ್ತು ತಿಳಿದುಕೊಳ್ಳಲು ನೆರವಾಯಿತು.

ರವಿಶಂಕರ್ ಮತ್ತು ಅಲಿ ಅಕ್ಬರ್ ಖಾನ್ ಅವರ ರಾಗಗಳು ಮತ್ತು ಸಂಗೀತ ಕೂಡಾ ವಿವಿಧ ಪ್ರದೇಶಗಳ ಜನರ ಸಹಭಾಗಿತ್ವ ಮ್ಯಾಜಿಕ್ ಸೃಷ್ಟಿಸಬಹುದು ಎನ್ನುವುದಕ್ಕೆ ಸಾಕ್ಷಿ. ಇಂಥ ಸಹಭಾಗಿತ್ವದ ಕಾರ್ಯ ಭಾರತದ ಇಂದಿನ ಅಗತ್ಯ" ಎಂದು ವಿಶ್ಲೇಷಿಸಿದರು. ಸಹಿಷ್ಣುತೆ ಬಗ್ಗೆ ಕೇವಲ ಮಾತನಾಡುವುದು ವಿಭಜನೆಯ ಅಪಾಯಕ್ಕೆ ಉತ್ತರವಲ್ಲ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News