ಡೈಮಂಡ್ ಲೀಗ್: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ದ್ವಿತೀಯ

Update: 2022-07-01 02:21 GMT

ಸ್ಟಾಕ್‍ಹೋಮ್: ಸ್ಟಾರ್ ಅಥ್ಲೀಟ್‍ಗಳಿಂದ ತುಂಬಿದ್ದ ಪ್ರತಿಷ್ಠಿತ ಸ್ಟಾಕ್‍ಹೋಮ್ ಡೈಮಂಡ್ ಲೀಗ್‍ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅಗ್ರ-3ರ ಪಟ್ಟಿಯಲ್ಲಿ ಸ್ಥಾನ ಪಡೆದರು. ರಾಷ್ಟ್ರೀಯ ದಾಖಲೆಯನ್ನು ಛಿದ್ರಗೊಳಿಸುವ ಪ್ರಯತ್ನದಲ್ಲಿ ಚೋಪ್ರಾ ಯಶಸ್ವಿಯಾದರೂ, 90 ಮೀಟರ್ ಗುರಿಯನ್ನು ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡರು.

24 ವರ್ಷ ವಯಸ್ಸಿನ ನೀರಜ್ ಚೋಪ್ರಾ ಅದ್ಭುತ ಎನಿಸುವ 89.94 ಮೀಟರ್ ಎಸೆಯುವ ಮೂಲಕ ವಿಶ್ವ ಜಾವೆಲಿನ್ ಥ್ರೋನಲ್ಲಿ ಚಿನ್ನದ ಮಾನದಂಡ ಎನಿಸಿದ 90 ಮೀಟರ್ ಗಡಿಯಿಂದ 6 ಸೆಂಟಿಮೀಟರ್‍ನಷ್ಟು ಹಿಂದುಳಿದರು. ಇದು ಅವರ ಅತ್ಯುತ್ತಮ ಪ್ರಯತ್ನವಾಗಿತ್ತು. ಅವರ ಇತರ ಎಸೆತಗಳು ಕ್ರಮವಾಗಿ 84.37 ಮೀಟರ್, 87.46 ಮೀಟರ್, 86.67 ಮೀಟರ್ ಮತ್ತು 86.84 ಮೀಟರ್ ಇದ್ದವು. ಅವರು ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯಾದ 89.30 ಮೀಟರ್ ಅನ್ನು ಉತ್ತಮಪಡಿಸಿಕೊಂಡರು. ಜೂನ್ 14ರಂದು ಫಿನ್ಲೆಂಡ್‍ನ ತುರ್ಕುನಲ್ಲಿ ನಡೆದ ಪಾವೊ ನುರ್ಮಿ ಗೇಮ್ಸ್ ನಲ್ಲಿ ಅವರು ಈ ದಾಖಲೆ ಸ್ಥಾಪಿಸಿದ್ದರು.

ಗ್ರೆನಾಡಾದ ಅಥ್ಲೀಟ್, ವಿಶ್ವಚಾಂಪಿಯನ್ ಮತ್ತು ಪ್ರಸಕ್ತ ಸೀಸನ್‍ನ ಅಗ್ರಗಣ್ಯರೆನಿಸಿದ ಆ್ಯಂಡರ್ಸನ್ ಪೀಟರ್ಸ್ 90.31 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು. ಅವರ ಮೂರನೇ ಪ್ರಯತ್ನದಲ್ಲಿ ಈ ಅತ್ಯುತ್ತಮ ಸಾಧನೆ ಬಂತು. ಪ್ರಸಕ್ತ ಸೀಸನ್‍ನಲ್ಲಿ ಇದಕ್ಕೂ ಮುನ್ನ ಎರಡು ಬಾರಿ ಅವರು 90 ಮೀಟರ್‍ಗಿಂತ ಅಧಿಕ ದೂರಕ್ಕೆ ಭರ್ಜಿ ಎಸೆದಿದ್ದು, ಡೈಮಂಡ್ ಲೀಗ್‍ನ ದೋಹಾ ಲೆಗ್‍ನಲ್ಲಿ 93.07 ಮೀಟರ್ ಹಾಗೂ ನೆದರ್ಲೆಂಡ್ಸ್‍ನ ಹೆಂಗೆಲೊದಲ್ಲಿ 90.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು.

ಜರ್ಮನಿಯ ಜ್ಯೂಲಿಯನ್ ವೆಬೆರ್ 89.08 ಮೀಟರ್ ಎಸೆಯುವ ಮೂಲಕ ಮೂರನೇ ಸ್ಥಾನ ಗಳಿಸಿದರೆ, ಟೋಕಿಯೊ ಒಲಿಂಪಿಕ್ ಬೆಳ್ಳಿಪದಕ ವಿಜೇತ ಜಾಕುಬ್ ವದ್ಲೆಜೆಚ್ 88.59 ಮೀಟರ್‍ನೊಂದಿಗೆ ನಾಲ್ಕನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News